Close

ಜಿಲ್ಲೆಯ ಬಗ್ಗೆ

ಚಾಮರಾಜನಗರವನ್ನು ಮೊದಲು ಅರಿಕುಟಾರ ಎಂದು ಕರೆಯಲಾಗುತ್ತಿತ್ತು. ಮೈಸೂರಿನ ಒಡೆಯರ್ ವಂಶಸ್ಥರಾದ ರಾಜ ಚಾಮರಾಜ ಒಡೆಯರ್ ಇಲ್ಲಿ ಜನಿಸಿದರು, ಆದ್ದರಿಂದ ಈ ಸ್ಥಳವನ್ನು ಅವರ ನಂತರ ಚಾಮರಾಜನಗರ ಎಂದು ಮರುನಾಮಕರಣ ಮಾಡಲಾಯಿತು.

ಕರ್ನಾಟಕದ ದಕ್ಷಿಣ ತುತ್ತತುದಿಯಲ್ಲಿರುವ . ದಕ್ಷಿಣ ಒಳನಾಡಿನ ಎಲೆ ಉದುರುವ, ಮಳೆಗಾಲದಲ್ಲಿ ಸದಾ ಹಸಿರಾಗಿರುವ ಅರಣ್ಯ ಸಾಲನ್ನು ಹೊಂದಿದೆ. ತಮಿಳುನಾಡು ಮತ್ತು ಕೇರಳಗಡಿಗುಂಟ ಹಂಚಿಕೊಂಡಿರುವ ಈ ಜಿಲ್ಲೆ35 ಉತ್ತರ ಅಕ್ಷಾಂಶದಿಂದ 12.18 ಉತ್ತರ ಅಕ್ಷಾಂಶದವರೆವಿಗೂ, 72.24 ಪೂರ್ವ ರೇಖಾಂಶದಿಂದ 77.46 ಪೂರ್ವ ರೇಖಾಂಶದ ನಡುವೆ 5685 ಚ.ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.

ಪೂರ್ವ ಮತ್ತು ಪಶ್ಚಿಮ ಘಟ್ಟ ಸಂದಿಸುವ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನ ಬೆಟ್ಟ ವನ್ಯಧಾಮ ಮತ್ತು ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ 1413 ಚ.ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿದೆ. ಜಿಲ್ಲೆಯ ಎತ್ತರದ ಕತ್ತರಿಬೆಟ್ಟ 1816 ಮೀ (ಇದು ಅತ್ತಿಖಾನೆ ಗ್ರಾಮದ ಹತ್ತಿರದಲ್ಲಿದೆ), ಬಿಳಿಗಿರಿರಂಗನ ಬೆಟ್ಟ 1151 ಎಂ, ಬೇಡಗುಳಿ ಎಸ್ಟೇಟು 1400 ಮೀ ಗಳಾಗಿದ್ದು ಆನೆ, ಹುಲಿ, ಚಿರತೆ, ಕಾಡುಕೋಣ, ಸೀಳುನಾಯಿ, ಜಿಂಕೆ, ಕರಡಿ, ಸಾರಂಗ, ಸಿಂಗಳೀಕ, ನವಿಲು, ಅಪರೂಪದ ಕೀಟ ಪ್ರಭೇದವನ್ನು ಒಳಗೊಂಡಿದೆ.

ಕೀಟಭಕ್ಷಕ ಸಸ್ಯವರ್ಗ ಒಳಗೊಂಡಂತೆ ಶ್ರೀಗಂಧ, ಬೀಟೆ, ಹೊನ್ನೆ, ನೀಲಗಿರಿ ಮತ್ತು ಸಿಂಕೋನ ವೃಕ್ಷಗಳ ಜೀವ-ವೈವಿದ್ಯತಾ ಆವಾಸಗಳ ನಡುವೆ ಕಾಣಬರುತ್ತದೆ.ಕ್ರಿಸ್ತಪೂರ್ವದಿಂದಲೂ ಆದಿ ಮಾನವನ ನೆಲೆಯಾಗಿದ್ದ ಶಿಲಾ ಸಮಾಧಿಗಳನ್ನು ಬುಡಕಟ್ಟು ಜನಾಂಗ ಸೋಲಿಗರು ವಾಸಿಸುವುದನ್ನು ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾಣಬಹುದಾಗಿದೆ. ಈ ಭಾಗದ ಜೀವನದಿಗಳಾದ ಸುವರ್ಣವತಿ ಚಿಕ್ಕಹೊಳೆ ಕಬಿನಿ, ಗುಂಡ್ಲು ನದಿಗಳು ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಯ ಉಪನದಿಗಳಾಗಿವೆ.

ಇವುಗಳಿಗೆ ಅಲ್ಲಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಜೀವನದಿ ಕಾವೇರಿ 110 ಕಿ.ಮೀ. ದೂರವನ್ನು ಕ್ರಮಿಸಿ, ಗಗನಚುಕ್ಕಿ, ಭರಚುಕ್ಕಿ ಜಲಪಾತ ಸೃಷ್ಟಿಸಿ 1902 ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ತಯಾರಿಕೆ ನೆಲೆಯಾಗಿದ್ದು ಇದೇ ಜಿಲ್ಲೆಯಲ್ಲಿ. ಮುಂದೆ ಮಹದೇಶ್ವರ ಬೆಟ್ಟದಿಂದ 50 ಕಿ.ಮೀ ಅಂತರದಲ್ಲಿರುವ ಹೊಗೆನಕಲ್ ಜಲಪಾತ ನೈಸರ್ಗಿಕ ಶಿಲೆಗಳನ್ನು ಸೃಷ್ಟಿಸಿದೆ.

ರಾಜ್ಯ, ರಾಷ್ಟ್ರ, ವಿದೇಶಿಯರ ಆಕರ್ಷಣೀಯ ನೈಸರ್ಗಿಕ ಜಲಪಾತಗಳು ಇಲ್ಲಿನ ವೈಶಿಷ್ಟ್ಯ ಗಂಗರು, ಹೊಯ್ಸಳರು, ವಿಜಯನಗರ, ಮೈಸೂರು ಅರಸರ ಕಲಾವೈಭವವನ್ನು ಚಾಮರಾಜನಗರದ ಬಳಿ ಇರುವ ನರಸಮಂಗಲ, ಹರದನಹಳ್ಳಿ, ಶಿಲಾಶಾಸನ, ಗುಂಡ್ಲುಪೇಟೆ ತಾಲೂಕಿನಲ್ಲಿ ಕಂಡುಬರುವ ವರಹಾವಾಸುದೇವ ಮಂದಿರ, ಹುಲುಗನ ಮುರಡಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಳೇಮಂಟಪ, ಜಹಾಗಿರ್‌ದಾರ್ ಬಂಗಲೆ, ಕೊಳ್ಳೆಗಾಲದ ಬಳಿಯ ಮಧ್ಯರಂಗ ಇಲ್ಲಿನ ಸಮೂಹ ದೇವಾಲಯಗಳು.