Close

ಆಸಕ್ತಿಯ ಸ್ಥಳಗಳು

ಚಾಮರಾಜೇಶ್ವರ ದೇವಾಲಯ

  • ಚಾಮರಾಜೇಶ್ವರ ದೇವಾಲಯ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ. ನಗರದ ಹೃದಯ ಭಾಗದಲ್ಲಿರುವ ದೇವಾಲಯ ಸ್ಥಾಪನೆಯಾದದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಒಂದು ಕಾಲದಲ್ಲಿ ಅರಿಕುಠಾರ ಎಂಬ ಗ್ರಾಮವಾಗಿದ್ದು, ಇದು ಚಾಮರಾಜ ಒಡೆಯರ್ ಜನಿಸಿದ್ದರಿಂದ ಚಾಮರಾಜನಗರ ಎಂಬ ಹೆಸರನ್ನು ಪಡೆಯಿತು. ದೇವಾಲಯದ ಮಹಾದ್ವಾರ ಪೂರ್ವ ದಿಕ್ಕಿಗಿದ್ದು 5 ಅಂತಸ್ತಿನ ಗೋಪುರವಿದೆ. ತುದಿಯಲ್ಲಿ 5 ಸುಂದರ ಚಿನ್ನದ ರಂಗಿನ ಕಲಶಗಳಿದ್ದು ಮುಂದೆ ಗರುಡಗಂಬವಿದೆ.
  • ದೇವಾಲಯ ಪ್ರವೇಶ ಮಾಡಿದಾಗ ಈಶ್ವರನಿಗೆ ಮುಖ ಮಾಡಿರುವ ಬೃಹತ್ ನಂದಿ ಇದೆ. ದೇವಾಲಯದ ಪ್ರಕಾರದಲ್ಲಿ 64 ಪುರಾತನ ಭಕ್ತರ ವಿಗ್ರಹಗಳಿವೆ. ಉತ್ತರದಲ್ಲಿ ಈಶ್ವರ ವಿಗ್ರಹ, ಈಶಾನ್ಯದಲ್ಲಿ ಯೋಗಶಾಲೆ, ಆಗ್ನೇಯದಲ್ಲಿ ಪಾಕ ಶಾಲೆಯೂ ಇದೆ. ಇಲ್ಲಿ ವಾಸ್ತುಶಿಲ್ಪವು ಹೊಯ್ಸಳರ ಕಲೆಯನ್ನು ನೆನಪಿಸುತ್ತವೆ.
  • ಈ ದೇವಾಲಯದ ಒಳಭಾಗದಲ್ಲಿ ಕಂಡು ಬರುವ ಚಿತ್ರಗಳೆಂದರೆ ಗಿರಿಜಾ ಕಲ್ಯಾಣ, ಸಮುದ್ರಮಥನ ಮತ್ತು ಚಾಮುಂಡೇಶ್ವರಿ, ಇವು 100 ವರ್ಷದ ಹಳೆಯವು. ಇಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿ ಆಷಾಡದ ಹುಣ್ಣಿಮೆಯ ದಿನ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ನವದಂಪತಿಗಳು ಹಣ್ಣು ಜವನವನ್ನು ಎಸೆದು ಭಕ್ತಿ ಭಾವ ಮೆರೆಯುವರು.

ಅರಿಕುಠಾರ:- ಈ ಸ್ಥಳಕ್ಕೆ ಹಿಂದೆ ಅರಿಕುಠಾರ ಅಥವಾ ಅರಿಕೂಠಾರ ಎಂಬ ಹೆಸರಿತ್ತು. ಒಡೆಯನೂರು ಎಂದು ಕರೆಯಲಾಗುತ್ತಿತ್ತು.

ಹರಳುಕೋಟೆ:- ನಗರದಿಂದ ಪೂವ್ಕ್ಕೆ 5 ಕಿ.ಮೀ. ದೂರದಲ್ಲಿ ಹರಳುಕೋಟೆ, ಶ್ರೀ ಆಂಜನೇಯ ಸ್ವಾಮಿ ದೇವಾಲಯವಿದೆ. “ಹನುಮಚ್ಚಿಂತನ” ಎಂಬ ಗದ್ಯ ಕೃತಿಯೂ “ಶ್ರೀ ಹನುಮತ್ ಸುಪ್ರಭಾತ” ಎಂಬ ಪಠ್ಯಮಾಲಿಕೆಯೂ ಈ ಕ್ಷೇತ್ರದ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವಗಳನ್ನು ಕುರಿತು ಬಣ್ಣಿಸಿರುವ ಕೃತಿಗಳು.

ಸುವರ್ಣಾವತಿ ಜಲಾಶಯ

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : 18 ಕಿ.ಮೀ. ಚಾಮರಾಜನಗರ ತಾಲೂಕಿನ ಜೀವನಾಡಿ ಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ ಗಜ್ಜಲ ಹಟ್ಟಿ ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ 1977ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. 26 ಮೀ. ಎತ್ತರ, ಉದ್ದ 1158 ಮೀ. ಇದ್ದು, ಈ ಜಲಾಶಯವು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಪ್ರದೇಶಗಳಿಗೆ ನೀರೊದಗಿಸುತ್ತದೆ.

  • ಕಾವೇರಿ ಕಣಿವೆಗೆ ಸೇರಿದ ಈ ಜಲಾಶಯದ ನೀರಿನ ಸಾಮರ್ಥ್ಯ ೨೫೮,೭೮ ಕ್ಯೂಸೆಕ್ಸ್ ಇದೆ. ಇದರ 2 ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿ ಚಿಕ್ಕಹೊಳೆ ಅಣೆಕಟ್ಟು ಇದ್ದು ಇದು ಮಧ್ಯಮಗಾತ್ರದ ಅಣೆಕಟ್ಟು ಆಗಿದೆ. ಈ ಎರಡೂ ಜಲಾಶಯಗಳು ನಿಸರ್ಗದ ಮಡಿಲಲ್ಲಿದ್ದು, ನೀರಾವರಿ, ಮೀನುಗಾರಿಕೆ, ತೋಟಗಾರಿಕೆಗೆ ಪ್ರೋತ್ಸಾಹವಿದೆ. ಇದು ನೀರಾವರಿ ಇಲಾಖೆಗೆ ಸೇರಿದ್ದು ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ.

ನರಸಮಂಗಲ

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : 24 ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ನೈರುತ್ಯದಲ್ಲಿರುವ ಗಂಗರ ಇತಿಹಾಸ ಬಿಂಬಿಸುವ ಗ್ರಾಮ ನರಸಮಂಗಲ, ಈ ಸ್ಥಳವು ಪ್ರಾಚೀನ ರಾಮಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಗಂಗರ ಕಾಲದಲ್ಲಿ ಅನೇಕ ಸುಂದರ ದೇವಾಲಯ ಮತ್ತು ಬಸದಿಗಳು ನಿರ್ಮಾಣಗೊಂಡವು ಅವುಗಳಲ್ಲಿ ಈ ದೇವಾಲಯವು ಒಂದು. ಇಲ್ಲಿನ ಶಿವಲಿಂಗವು 6 ಅಡಿ ಎತ್ತರ 12 ಅಡಿಗಳನ್ನು ಸುತ್ತಳತೆ ಹೊಂದಿದೆ.

  • ಈ ದೇವಾಲಯವು ವಿಶಾಲವಾದ ಗರ್ಭಗೃಹ, ಕಿರಿದಾದ ಸುಖನಾಸಿ ಒಂಭತ್ತು ಅಂಕಣಗಳ ನವರಂಗಗಳಿವೆ. ಮೇಲೆ ವಿಮಾನ ಗೋಪುರವಿದೆ. ಇದು ತಮಿಳುನಾಡಿನ ಮಹಾಬಲಿಪುರಂ ಶಿಲ್ಪವನ್ನು ಹೋಲುವುದು. ಶಿಲ್ಪಗಳು ಬಹು ಸುಂದರ ಕಲಾ ಕೃತಿಗಳಾಗಿವೆ. ರಾಮಾಯಣ ಮಹಾಭಾರತ ಕಥೆಗೆ ಸಂಬಂಧಪಟ್ಟ ಹಲವಾರು ಸನ್ನಿವೇಷಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದೇವಾಲಯವನ್ನು ಭಾರತ ಸರ್ಕಾರವು 1958ರಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ.

ಮಲೆಯೂರಿನ ಕನಕಗಿರಿ

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : 25 ಕಿ.ಮೀ. ಚಾಮರಾಜನಗರ ಪಶ್ಚಿಮದಲ್ಲಿರುವ ಮಲೆಯೂರಿನ ಕನಕಗಿರಿ ಜಗತ್ತಿನ ಸುಪ್ರಸಿದ್ಧ ಜೈನ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಪಶ್ಚಿಮಕ್ಕಿರುವ ಈ ಬೆಟ್ಟದ ಬಂಡೆಗಳ ಮೇಲೆ ಚರಣ ಪಾದುಕೆಗಳು, ಶಿಲಾಶಾಸನಗಳು, ಸಮಾಧಿ ಮಂಟಪ ಮತ್ತು ಗುಹೆಗಳಿವೆ. 10ನೇ ಶತಮಾನಕ್ಕೆ ಸೇರಿದ ಕನಕಗಿರಿ ಮೇಲಿನ ಪಾರ್ಶ್ವನಾಥ ಬಸದಿ ಅತಿ ಪುರಾತನ ಹಾಗೂ ಸುಂದರ ಬಸದಿಯಾಗಿದೆ. ಈ ಸ್ಥಳದಲ್ಲಿ ನಾಗಾರ್ಜುನನಿಗೆ ಪದ್ಮಾವತಿ ಅಮ್ಮನವರು ಲೋಹ ವನ್ನು ಚಿನ್ನ ಮಾಡುವ ವಿದ್ಯೆಯನ್ನು ತಿಳಿಸಿದರು.

  • ಈ ಕಾರಣದಿಂದ ಇದಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ. ಗಂಗರು ಮತ್ತು ಹೊಯ್ಸಳ ಕಾಲದ ಕಟ್ಟಡಗಳು, ಶಿಲಾಶಾಸನಗಳು ಇಲ್ಲಿ ಕಂಡು ಬರುತ್ತವೆ. ಇಲ್ಲಿನ ಶಿಲಾಶಾಸನಗಳ ಪ್ರಕಾರ ಅಜಿತಮುನಿ ಚಂದ್ರಸೇನಾಚಾರ್ಯ ಮುಂತಾದ ಹಲವರು ಸಲ್ಲೇಖನ ವ್ರತ ಕೈಗೊಂಡು ಸಮಾಧಿ ಪಡೆದರೆಂದು ತಿಳಿಯುತ್ತದೆ. ‘ಕಲ್ಯಾಣಕಾರಕ ಚಿಕಿತ್ಸಾಶಾಸ್ತ್ರ’ ಗ್ರಂಥ ಬರೆದ ಶ್ರೀ ಪೂಜ್ಯಪಾದರು ಈ ಊರಿನವರು.

ದಿವ್ಯಲಿಂಗೇಶ್ವರ ದೇಗುಲ

  • ಚಾಮರಾಜನಗರ ಜಿಲ್ಲಾ ಕೇಂದ್ರದಿಂದ:  5 ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಆಗ್ನೇಯದಿಕ್ಕಿಗಿರುವ ಹೋಬಳಿಕೇಂದ್ರ ಹರದನಹಳ್ಳಿ ಗ್ರಾಮದಲ್ಲಿ ಈ ದೇವಾಲಯವಿದೆ. ಹಿಂದೆ ಹೊಯ್ಸಳರು, ವಿಜಯನಗರ ಅರಸರು ಮತ್ತು ಮೈಸೂರು ಅರಸರು ಆಳುತ್ತಿದ್ದರು. ಈ ಊರಿನಲ್ಲಿ ಹಿಂದೆ ಕೋಟೆಯಿದ್ದು ಈಗ ಹಾಳಾಗಿದೆ. ಈ ಊರಿಗೆ ಕಳಸಪ್ರಾಯವಾಗಿರುವುದು ದಿವ್ಯ ಲಿಂಗೇಶ್ವರ ದೇವಾಲಯ. ಈ ದೇಗುಲವು ಗೋಪುರ ಮತ್ತು ಗರುಡಗಂಭವನ್ನು ಒಳಗೊಂಡಿದ್ದು 2001ನೇ ಇಸವಿಯ ಮಳೆಗಾಲದಲ್ಲಿ ರಾಜಗೋಪರವು ಶಿಥಿಲಗೊಂಡು ನೆಲಸಮವಾಗಿದೆ. *13ನೇ ಶತಮಾನದಲ್ಲಿ ಹೊಯ್ಸಳ ವೀರಬಲ್ಲಾಳರ ಕಾಲದಲ್ಲಿ ನಿರ್ಮಾಣವಾಗಿತ್ತು. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಕಲಾತ್ಮಕವಾಗಿದೆ. ಇದರಿಂದ 105 ಅಡಿ ದೂರದಲ್ಲಿ ನಂದೀಶ್ವರನ ವಿಗ್ರಹವಿದೆ. ಇದೊಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದು ಆಕರ್ಷಿಣಿಯ ಸ್ಥಳವಾಗಿದೆ. ಈ ಗ್ರಾಮವು ಮಹಿಮಾಪುರುಷರಾದ “ಎಡೆಯೂರು ಸಿದ್ಧಲಿಂಗೇಶ್ವರ”ರ ಜನ್ಮಸ್ಥಳವೂ ಹೌದು.

ಬೂದಿ ಪಡಗ

  • ಚಾಮರಾಜನಗರ ಜಿಲ್ಲಾ ಕೇಂದ್ರದಿಂದ: 30 ಕಿ.ಮೀ. ಸುವರ್ಣಾವತಿ ಜಲಾಶಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ಧ ವನ್ಯಜೀವಿ ವಿಶ್ರಾಂತಿಧಾಮ, ಮೈಸೂರು ಮಹಾರಾಜರು – ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ವಸತಿಗೃಹಗಳು ವಿಶಾಲಹುಲ್ಲು ಮೈದಾನ. ಅಮೂಲ್ಯ ವನ್ಯ ಜೀವಿಗಳು, ಬೂದಿಪಡಗದ ವಿಶೇಷಗಳು. ವನ್ಯಜೀವಿ ಛಾಯಾ ಗ್ರಾಹಕರಿಗೆ, ಪ್ರವಾಸಿಗರಿಗೆ ಸಂಶೋಧಕರಿಗೆ ಇದು ಅಚ್ಚುಮೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಬೂದಿಪಡಗ ಬಿಳಿಗಿರಿರಂಗನ ಬೆಟ್ಟಗಳಲ್ಲಿ ವನ್ಯ ಜೀವಿಧಾಮದ ಭಾಗವಾಗಿದೆ.

ಬೇಡಗುಳಿ ಮತ್ತು ಅತ್ತಿಖಾನೆ

  • ಚಾಮರಾಜನಗರ ಜಿಲ್ಲಾ ಕೇಂದ್ರದಿಂದ: 50 ಮತ್ತು 62 ಕಿ.ಮೀ ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ನೀಲಗಿರಿ ಶ್ರೇಣಿಯ ಅಂಜಿನಲ್ಲಿರುವ ಬೇಡಗುಳಿ ಕರ್ನಾಟಕ – ತಮಿಳುನಾಡಿನ ಸೀಮಾರೇಖೆ. ನಿತ್ಯಹರಿದ್ವರ್ಣದ ವನ್ಯಜೀವಿಧಾಮ. ಬೇಡಗುಳಿ ಮತ್ತು ಅತ್ತಿಖಾನೆ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ನರ ಕಾಲದ ಕಾಫಿ ತೋಟಗಳು ವಿಶೇಷಗಳು. ಬೇಡಗುಳಿ ಮತ್ತು ಅತ್ತಿಖಾನೆ ಗಿರಿಜನರ ಹಾಡಿಗಳು ಅವರ ಹಾಡುಪಾಡು.
  • ಅವರ ಜೀವನ ಶೈಲಿ ಮತ್ತು ಸಂಸ್ಕೃತಿ ಸಂಪ್ರದಾಯಗಳು ಅಧ್ಯಯನ ಯೋಗ್ಯವಾಗಿದೆ. ಸುಂದರ ಗಿರಿಶ್ರೇಣಿಗಳು ಅದ್ಭುತ ಕಣಿವೆಗಳು ಮನೋಹರ ಜಲಪಾತಗಳು ಆಕರ್ಷಕ. ವನ್ಯಜೀವಿಗಳು ಬೇಡಗುಳಿ ಮತ್ತು ಅತ್ತಿಖಾನೆ ಅರಣ್ಯ ಪ್ರದೇಶದ ವಿಶೇಷ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ ಅತಿಥಿಗೃಹ ನೂರು ವರುಷಗಳಷ್ಟು ಪುರಾತನವಾಗಿದೆ. ವನ್ಯಜೀವಿ ಪ್ರದೇಶವಾಗಿರುವುದರಿಂದ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ.
  • ಎಲೆಮರೆಯ ಕಾಯಿಯಂತಿರುವ ಅತ್ತಿಖಾನೆಯ ಕತ್ತರಿ ಬೆಟ್ಟವು (ಸಮುದ್ರ ಮಟ್ಟದಿಂದ 1816 ಮೀ) ಈ ಜಿಲ್ಲೆಯಲ್ಲೆ ಅತಿ ಎತ್ತರವಾದ ಬೆಟ್ಟವಾಗಿದ್ದು, ಇದರ ತಪ್ಪಲಿನಲ್ಲಿ ಹುಟ್ಟುವ ಝರಿಗಳೆ ತೊರೆಯಾಗಿ ಹರಿದು ಚಾಮರಾಜನಗರ ಜಿಲ್ಲೆಯ ಜೀವನಾಡಿಯಾದ ಸುವರ್ಣಾವತಿ ನದಿಯಾಗಿ ಹರಿದು ಸುವರ್ಣಾವತಿ ಜಲಾಶಯದ ಒಡಲಸೇರಿ ಜಿಲ್ಲೆಯ ಆಧಾರವಾಗಿದೆ. ಅತ್ತಿಖಾನೆ ಗ್ರಾಮವು ಕೊಳ್ಳೇಗಾಲ ತಾಲ್ಲೂಕಿಗೆ ಸೇರಿದ್ದು ಸುಂದರ ಅತಿಸುಂದರ ಗಿರಿಕಣಿವೆಗಳ ಆಗರವೇ ಆಗಿದೆ.

ಜೋಡಿಗೆರೆ

  • ಜೋಡಿಗೆರೆ ಸೌಂದರ್ಯವನ್ನು ಒಂದೆರಡು ಮಾತಿನಲ್ಲಿ ವರ್ಣಿಸಲಾಗದು. ಇದೊಂದು ಪ್ರಕೃತಿಯ ಅಪ್ರತಿಮ ಕೊಡುಗೆ ನಿಂತು ನೋಡಿದರೆ ನೋಡಿದಷ್ಟು ಆನಂದ. ವಿಶಾಲ ಹುಲ್ಲು ಗಾವಲು. ಶೋಲಾ ಅರಣ್ಯ ಪ್ರದೇಶ. ಮನಬಿಚ್ಚಿ ಓಡಾಡುವ ವನ್ಯಜೀವಿಗಳು ಸುಯ್‌ಗುಡುವ ತಂಗಾಳಿ. ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ.
  • ಜಗತ್ತಿನ ಅಪರೂಪದ ಪ್ರದೇಶವೆಂಬಂತೆ ವನ್ಯಜೀವಿಗಳು ಹುಲ್ಲುಗಾವಲಿನಲ್ಲಿ ಗುಂಪುಗುಂಪಾಗಿ ನಲಿದಾಡುವುದನ್ನು ನೋಡಿದರೆ ಇದೊಂದು ಮಿನಿ ಜುರಾಸಿಕ್ ಪಾರ್ಕ್‌ನಂತೆ ಕಾಣುತ್ತದೆ. ಸಮುದ್ರ ಮಟ್ಟದಿಂದ ಸುಮಾರು 1600 ಮೀಟರ್‌ಗಳಷ್ಟು ಎತ್ತರದಲ್ಲಿರುವ ಜೋಡಿಗೆರೆ ಬಿಳಿಗಿರಿ ರಂಗನಬೆಟ್ಟ ವನ್ಯಜೀವಿಧಾಮದ ಒಂದು ಭಾಗವಾಗಿದ್ದು ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ.

ಕೆ. ಗುಡಿ (ಕ್ಯಾತೇದೇವರ ಗುಡಿ)

  • ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ. ಸಮುದ್ರ ಮಟ್ಟದಿಂದ 1450 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿ ಕರ್ನಾಟಕ ಜಂಗಲ್ ಲಾಡ್ಜ್ ನ ವನ್ಯಜೀವಿ ಪ್ರವಾಸೋದ್ಯಮ ಕೆಲಸ ಮಾಡುತ್ತಿದೆ. ಜೊತೆಗೆ ಅರಣ್ಯ ಇಲಾಖೆಯ ಅತಿಥಿಗೃಹವಿದೆ. ಅರಣ್ಯ ಇಲಾಖೆಯ ಆನೆ ಸಫಾರಿ ಮತ್ತು ವನ್ಯಜೀವಿ ಸಫಾರಿ ಬಹಳ ಪ್ರಸಿದ್ಧ.
  • ಕೆ. ಗುಡಿಗೆ ದೇಶ-ವಿದೇಶಗಳು ಪ್ರವಾಸಿಗರ ಆಗಮನವಿದೆ. ಪ್ರಾಣಿ ಪಕ್ಷಿ, ಪ್ರಕೃತಿ ಸಂಶೋಧಕರಿಗೆ ಮತ್ತು ಪ್ರವಾಸಿಗರಿಗೆ ಕೆ. ಗುಡಿ ರಮ್ಯತಾಣವಾಗಿದ್ದು ಇಲ್ಲಿ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ಕಡವೆ ಈ ಅರಣ್ಯದ ಪ್ರಮುಖ ವನ್ಯಜೀವಿಗಳು.

ಬೆಲ್ಲತ್ತ ಪಕ್ಷಿರಾಶಿ

ಚಾಮರಾಜನಗರ ತಾಲ್ಲೋಕಿ ನಲ್ಲಿರುವ ಬೆಲ್ಲತ್ತ ಜಲಾಶಯ ಬಿಳಿಗಿರಿರಂಗನ ಬೆಟ್ಟದ ಕಾಡಂಚಿನಲ್ಲಿದೆ. ಕಾಡಂಚಿಗೆ ತಾಗಿಕೊಂಡಿರುವ ಹಿನ್ನೀರಿ ನಿಂದಾಗಿ ಪ್ರಾಣಿಗಳು ಪಕ್ಷಿಗಳಿಗೆ ಸಮೃದ್ಧ ಪ್ರದೇಶವಾಗಿದೆ. ಈ ಜಲಾಶಯದ ಸುತ್ತ ದೇಶ ವಿದೇಶಗಳ ವೈವಿಧ್ಯಮಯ ಪಕ್ಷಿಗಳ ಸಮ್ಮಿಲನವಾಗುತ್ತದೆ. ನಿಸರ್ಗ ಪ್ರಿಯರಿಗೆ ಪಕ್ಷಿ ಛಾಯಗ್ರಾಹಕರಿಗೆ ಮತ್ತು ಸಂಶೋಧಕರಿಗೆ ಇದೊಂದು ಉತ್ತಮ ತಾಣವಾಗಿದೆ.

ಯಳಂದೂರು

  • ಬಹಳ ಹಿಂದೆ ಯಳಂದೂರು ಪದಿನಾಡಿನ ರಾಜವಂಶಸ್ಥರ ಮುಖ್ಯ ಪಟ್ಟಣ ಅಥವಾ ರಾಜಧಾನಿಯಾಗಿತ್ತು. ಈ ವಿಷಯ ಹದಿನಾಡಿನ ಉಲ್ಲೇಖ ಕ್ರಿ.ಶ. 1018ರ ಚೋಳ ದೊರೆ ಒಂದನೇ ರಾಜೇಂದ್ರನ ಕಾಲದ ಶಾಸನದಲ್ಲಿ ಕಂಡು ಬಂದಿದೆ. ಜೈನಧರ್ಮದ ಪ್ರಮುಖ ಮುನಿಗಳಾದ ಶ್ರೀ ಬಾಲಚಂದ್ರ ಮುನಿಗಳ ಹೆಸರು ಈ ಊರಿಗೆ ಇತ್ತು. ನಂತರ ಬಾಲೇಂದುಪುರ ಎಂದಾಯಿತು. ನಂತರ ಎಳವಂದೂರಾಯಿತು. ಮುಂದೆ ಯಳಂದೂರಾಯಿತು. ಇಲ್ಲಿ ಜೈನ ಧರ್ಮದ ಮತ್ತು ವೀರಶೈವ ಧರ್ಮದ ಅನೇಕ ಹೆಸರಾಂತ ಮಹಾಕವಿಗಳು ಇಲ್ಲಿ ಇದ್ದರು.
  • ಇವರು ರಚಿಸಿರುವ ಲೀಲಾವತಿ ಪ್ರಬಂಧ ರಾಜಶೇಖರ ವಿಲಾಸ ಹಾಗೂ ಸಂಚಿ ಹೊನ್ನಮ್ಮ ರಚಿಸಿದ ಹದಿಬದಿಯ ಧರ್ಮ ಶ್ರೇಷ್ಠ ಕೃತಿಗಳಾಗಿವೆ. ಇಂತಹ ಪುಣ್ಯ ಭೂಮಿಯಲ್ಲಿ (ಸುವರ್ಣಾವತಿ) ಹೊನ್ನು ಹೊಳೆ ಹರಿಯುತ್ತದೆ. ಇದಕ್ಕೆ ಇರುವ ದಂತ ಕಥೆಯ ಉಲ್ಲೇಖವು ಶಾಸನವೊಂದರಲ್ಲಿ ದೊರೆಯುತ್ತದೆ. ಯಳಂದೂರು ಸಂಪದ್ಭರಿತವಾದ ಹಾಗೂ ಜನಾಕರ್ಷಕವಾದ ಸ್ಥಳವಾಗಿದ್ದು ನಿರ್ದಿಷ್ಟ ರಾಜಮನೆತನಗಳು ಇದ್ದವು ಎಂಬುದು ತಿಳಿದು ಬಂದಿದೆ.

ಬಳೇ ಮಂಟಪ

ಯಳಂದೂರಿನ ಗೌರೀಶ್ವರ ದೇವಾಲಯದ ಮುಖ ಮಂಟಪವನ್ನು ಕ್ರಿ.ಶ. 1654ರಲ್ಲಿ ಮುದ್ದುರಾಜನು ಬಹಳ ರಮ್ಯವಾಗಿ ಕಟ್ಟಿಸಿದ್ದಾನೆ. ಇದು ಬಹಳ ಸುಂದರವಾದ ಅತ್ಯಂತ ಪ್ರಾಚೀನ ಹಾಗೂ ಕಲಾಪೂರ್ಣ ಕಗ್ಗಲ್ಲಿನ ಮಂಟಪವಾಗಿದೆ. ಈ ಮಂಟಪ ಹಂಪೆಯ 27 ಕಲ್ಲಿನ ರಥವನ್ನು ಹೋಲುತ್ತದೆ. ಈ ಮಂಟಪವು ಬೇಲೂರು ಮತ್ತು ಹಳೇ ಬೀಡಿನ ದೇವಾಲಯದ ಶಿಲ್ಪಕಲೆಯಂತೆ ಇದೆ. ಈ ಮಂಟಪವೂ ಚತುರ್ಮುಖಗಳನ್ನು ಹೊಂದಿದ್ದು ಸುಂದರವಾದ ಕಲ್ಲಿನ ಬಳೆಗಳಿಂದ ಕೂಡಿದ ಮಂಟಪವಾಗಿದೆ.

  • ಶಿಲೆಯ ಗೋಡೆಯಲ್ಲಿ ಶೈವ ಪುರಾಣದ, ರಾಮಾಯಣದ ಹಾಗೂ ಮಹಾಭಾರತದ ಕೆಲವು ಘಟನೆಗಳನ್ನು ಅತ್ಯಂತ ಮನೋಹರವಾಗಿ ಸುಂದರವಾಗಿ ಕೆತ್ತಿರುವುದನ್ನು ನೋಡಬಹುದು. ಈ ಮಂಟಪದ ಮಧ್ಯಭಾಗದಲ್ಲಿ ಒಂದೇ ಕಲ್ಲಿನಿಂದ ಕಮಲದ ಮೊಗ್ಗನ್ನು ಬಿಡಿಸಿ ಮೇಲ್ಭಾಗದಲ್ಲಿ ಜೋಡಿಸಿರುವುದು ಮನೋಹರವಾಗಿದೆ. ಈ ಮಂಟಪದ ಮೂಲೆಗಳಲ್ಲಿ ಬಳೆಗಳನ್ನು ಒಂದರೊಳಗೊಂದು ಜೋಡಿಸಿದಂತೆ ಒಂದೇ ಕಲ್ಲಿನಿಂದ ಮಾಡಿರುವುದು ಅದ್ಭುತವಾಗಿದೆ. ಈ ಬಳೆಗಳು ಇರುವುದರಿಂದಲೇ ರೂಢಿಯಿಂದ ಈ ಮಂಟಪವನ್ನು ಬಳೆ ಮಂಟಪ ಎಂದು ಕರೆಯುತ್ತಾರೆ.

ಗೌರೀಶ್ವರ ದೇವಾಲಯ

  • ಯಳಂದೂರಿನಲ್ಲಿರುವ ಗೌರೀಶ್ವರ ದೇವಾಲಯದ ವೈಶಿಷ್ಟತೆಯನ್ನು ತಿಳಿಯಲು ಇಲ್ಲಿರುವ ಶಿಲಾಶಾಸನ ಒಂದೇ ಆಧಾರ ಯಳಂದೂರಿನಲ್ಲಿ ಆಳಿದ ರಾಜ ಮನೆತನಗಳಲ್ಲಿ ಪದಿನಾಡ ಅರಸರೇ ಪ್ರಮುಖರು. ಈ ಮನೆತನದ ಮೊದಲನೆರಾಜ ಸಿಂಗದೇವಭೂಪನು ಗೌರೀಶ್ವರ ದೇವಾಲಯವನ್ನು ಮುದ್ದುರಾಜನು ಕ್ರಿ.ಶ. 1654ರಲ್ಲಿ ದೇವಾಲಯದ ಮುಖ ಮಂಟಪ ಪಂಚಲಿಂಗಗಳನ್ನೊಳಗೊಂಡ ಗುಡಿಗಳನ್ನು ಕಟ್ಟಿಸಿದ್ದಾನೆ.
  • ಈ ಗೌರೀಶ್ವರನು ಹಿಂದೆ ಕೃತಾಯುಗದಲ್ಲಿ ಜಮದಗ್ನಿ ಮಹಾರ್ಷಿಯಿಂದ “ತ್ರಿಪುರಾಂತಕ”ನೆಂದೂ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಂದ “ನೀಲಕಂಠ” ನೆಂದೂ, ದ್ವಾಪರಾಯುಗದಲ್ಲಿ ಪಾಂಡವರಿಂದ ಲೋಕೇಶ್ವರನೆಂದೂ ಕಲಿಯುಗದಲ್ಲಿ ಪದಿನಾಡಿನ ರಾಜ ವಂಶಸ್ಥರು ಗೌರೀಶ್ವರನೆಂದೂ ಪೂಜಿಸುತ್ತಿದ್ದರು. ಈ ದೇವಾಲಯದ ಆವರಣದಲ್ಲಿರುವ ಎರಡು ಪಗಡೆ ಮರಗಳು ದೇವಾಲಯದ ಆವರಣವನ್ನು ಬೇಸಿಗೆಯಲ್ಲೂ ತಂಪಾಗಿಸುತ್ತಿದೆ.

ಬಿಳಿಗಿರಿರಂಗನಬೆಟ್ಟ

  • ಪೂರ್ವ ಘಟ್ಟದಲ್ಲಿ ಮಲೈ ಮಹಾದೇಶ್ವರ ಬೆಟ್ಟ ಶ್ರೇಣಿ ಹಾಗೂ ದಿಂಬಮ್ ಬೆಟ್ಟ ಶ್ರೇಣಿಗಳ ನಡುವೆ 30 ಮೈಲಿ ದೂರ ಫಲವತ್ತಾದ ಮಣ್ಣು ಮತ್ತು ದಟ್ಟ ಅರಣ್ಯದಿಂದ ಕೂಡಿರುವ ಬೆಟ್ಟವೇ ಬಿಳಿಗಿರಿರಂಗನ ಬೆಟ್ಟ. ಯಳಂದೂರು ತಾಲ್ಲೂಕಿನಿಂದ 24 ಕಿ.ಮೀ. ದೂರದಲ್ಲಿರುವ ಈ ಬೆಟ್ಟವು ಬಿಳಿಕಲ್ಲು ಬೆಟ್ಟ. ಶ್ವೇತಾದ್ರಿಬೆಟ್ಟ. ಬಿಳಿಗಿರಿರಂಗಸ್ವಾಮಿ ಬೆಟ್ಟ ಎಂದು ಹಲವಾರು ಹೆಸರುಗಳಿಂದ ಪ್ರಸಿದ್ಧವಾಗಿದೆ.
  • ಈ ಬೆಟ್ಟವು ಸಮುದ್ರಮಟ್ಟದಿಂದ 4470 ಅಡಿಗಳ ಎತ್ತರದಲ್ಲಿದ್ದು, ಔಷಧಿ ಸಸ್ಯಗಳಿಂದಲೂ, ತೇಗ, ಬೀಟೆ, ಹೊನ್ನೇ, ಮತ್ತಿ, ಬಿದುರು, ಮುಂತಾದ ಬೆಲೆ ಬಾಳುವ ಮರಗಳಿಂದ ಕೂಡಿದ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಹುಲಿ, ಚಿರತೆ, ಜಿಂಕೆ, ಆನೆ, ಕಾಡೆಮ್ಮೆ, ಕರಡಿ, ಮುಂತಾದ ಕಾಡು ಮೃಗಗಳು ಇವೆ. ಈ ಕಾನನ ಪ್ರದೇಶವನ್ನು ಪಾಂಡವರ ಕಾಲದಲ್ಲಿ ಚಂಪಕಾರಣ್ಯ ಎಂದು, ಗಂಗರ ಕಾಲದಲ್ಲಿ ಗಜಾರಾಣ್ಯ ಎಂದು ಕರೆಯುತ್ತಿದ್ದರು.
  • ಶಿಲಾಯುಗದ ಮಾನವರು ಬಳಸುತ್ತಿದ್ದ ಆಯುಧಗಳು, ಮಡಿಕೆಗಳು, ಮತ್ತು ಅವರ ಸಮಾಧಿಗಳು, ಕಂಡು ಬಂದಿದೆ. ಬಿಳಿಗಿರಿರಂಗಸ್ವಾಮಿ ಬೆಟ್ಟದಲ್ಲಿರುವ ಶ್ರೀ ರಂಗಸ್ವಾಮಿ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ದೊಡ್ಡ ಜಾತ್ರೆಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ.

ದೊಡ್ಡ ಸಂಪಿಗೆ

ಇದು ಬಿಳಿಗಿರರಂಗನ ಬೆಟ್ಟದ ಕಾಡಿಗೆ ಸೇರಿದ ಪ್ರದೇಶದಲ್ಲಿದ್ದು ಈ ಸ್ಥಳದಲ್ಲಿ ಭಾರ್ಗವೀ ನದಿ ನಯನ ಮನೋಹರವಾದ ಕಣಿವೆಯಲ್ಲಿ ಹರಿಯುತ್ತಿದೆ. ಪರಶುರಾಮನು ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಪರ್ವತದ ಮೇಲೆ ತಪಸ್ಸಾಚರಿಸಿದರೆಂದು ಪ್ರತೀತಿ. ಈ ಸ್ಥಳದಲ್ಲಿ ದೊಡ್ಡ ಸಂಪಿಗೆ ವೃಕ್ಷವಿದೆ. ಈ ಮಹಾವೃಕ್ಷದಲ್ಲಿ ೩ ಕೊಂಬೆಗಳಿದ್ದು ಇವು ಬ್ರಹ್ಮ-ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದು ತಿಳಿಯಲಾಗಿದೆ. ಈ ಮಹಾವೃಕ್ಷವನ್ನು ‘ಸೋಲಿಗರು’ ತಮ್ಮ ಆರಾಧ್ಯ ದೈವವಾಗಿ ಭಯ ಭಕ್ತಿಯಿಂದ ಪೂಜಿಸುತ್ತಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಲಯದ ಪ್ರವಾಸಿ ತಾಣಗಳು

  1. ಮರಡಿಗುಡ್ಡ,
  2. ಚಿಲಕವಾಡಿ,
  3. ಕುಂತೂರು,
  4. ಕುರುಬನ ಕಟ್ಟೆ,
  5. ಕನಕಗಿರಿ ಕ್ಷೇತ್ರ,
  6. ಚಿಕ್ಕಲ್ಲೂರು,
  7. ಉಗನಿಯ,
  8. ಶಿವನ ಸಮುದ್ರ,
  9. ವೆಸ್ಲಿ ಸೇತುವೆ,
  10. ಬೂದಬಾಳು ಕ್ಷೇತ್ರ,
  11. ಭರಚುಕ್ಕಿ,
  12. ಯಡಕುರಿ

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = 4೦ ಕಿ.ಮೀ. ಕೊಳ್ಳೇಗಾಲ ವಲಯ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಗಡಿ ತಾಲ್ಲೂಕು, ಪ್ರಕೃತಿ ಸಂಪತ್ತು ಬಹಳಷ್ಟಿದ್ದು ಜಲಪಾತಗಳು, ದೇವಸ್ಥಾನಗಳನ್ನು ಹೊಂದಿದೆ. ವಲಯದ ಸ್ವಲ್ಪಭಾಗ ನೀರಾವರಿ ಹೊಂದಿದೆ. ಈ ಹಿಂದೆ ಈ ಪಟ್ಟಣದಲ್ಲಿ ಕೌಹಳ ಮತ್ತು ಗಾಲವ ಎಂಬ ಈರ್ವರು ಮಹರ್ಷಿಗಳು ನೆಲೆಸಿದ್ದರಿಂದ ಕೌಹಳಗಾಲವ ನಗರವಾಗಿ ಮುಂದೆ ಕೊಳ್ಳೇಗಾಲವೆಂದು ಪ್ರಸಿದ್ಧಿ ಪಡೆಯಿತು. ಇಲ್ಲಿಯ ರೇಷ್ಮೆ ಮಾರುಕಟ್ಟೆಯು ರೇಷ್ಮೆ ಬೆಳೆಗಾರರಿಗೆ ವರದಾನವಾಗಿದೆ. ಕೊಳ್ಳೇಗಾಲದ ಚಾರಿತ್ರಿಕ ಮುಖವನ್ನು ಅವಲೋಕಿಸಿದರೆ ಜನಪದ ನಾಯಕರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸತ್ ಸಂಕಲ್ಪಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ಮಲೆ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿಯಂತಹ ಜಂಗಮ ಶ್ರೇಷ್ಠರು ನಡೆದಾಡಿದ ಪುಣ್ಯಭೂಮಿ. ನಾಡಿನ ಹಿರಿಯ ಕವಿ ಷಟ್ ಶಾಸ್ತ್ರ ಕೋವಿದ ಶ್ರೀ ನಿಜಗುಣಶಿವಯೋಗಿ ನಂತರದ ಶ್ರೀ ಕುಮಾರ ನಿಜಗುಣಸ್ವಾಮಿ ಹಾಗೂ ಡಾ. ರಾಜ್‌ಕುಮಾರ್ ಸಿಂಗಾನಲ್ಲೂರಿನವರಾಗಿದ್ದು ಇವರೆಲ್ಲರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ಪ್ರದೇಶವಾಗಿದೆ.

ಮರಡಿಗುಡ್ಡ

ಪವಾಡ ಪುರುಷ ಶ್ರೀ ಮಹದೇಶ್ವರರು ಮಂಡಿ ಊರಿದ ಸ್ಥಳ ಮರಡಿಗುಡ್ಡವಾಗಿದೆ. ಬಸ್ತೀಪುರ : ಪಟ್ಟಣದ ಉತ್ತರ ದಿಕ್ಕಿನಲ್ಲಿದ್ದು, ಜೈನ ಬಸದಿಗಳಿದ್ದ ಪುರಾವೆಗಳಿವೆ.

ಇತರೆ ಸ್ಥಳಗಳು

  1. ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನ,
  2. ಮಾಳಿಗೆ ಮಾರಮ್ಮ,
  3. ಸೋಮೇಶ್ವರ ಸ್ವಾಮಿ ದೇವಸ್ಥಾನ,
  4. ಚೌಡೇಶ್ವರಿ ದೇವಸ್ಥಾನ,
  5. ಮುರುಡೇಶ್ವರ ಸ್ವಾಮಿ ದೇವಸ್ಥಾನ,
  6. ಕನ್ನಿಕಾ ಪರಮೇಶ್ವರಿ ದೇವಸ್ಥಾನ,
  7. ಉಚ್ಛಾಲಮ್ಮ ದೇವಸ್ಥಾನ,
  8. ಮಕ್ಕಳ ಮಹದೇಶ್ವರ ದೇವಸ್ಥಾನ,
  9. ನಾರಾಯಣ ಸ್ವಾಮಿ ದೇವಸ್ಥಾನ ಹಾಗೂ
  10. ಕಲ್ಯಾಣಿ.

ಚಿಲಕವಾಡಿ

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = 12 ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = 52 ಕಿ.ಮೀ. ಇದೊಂದು ಧಾರ್ಮಿಕ ಹಾಗೂ ಕವಿಗಳ ಊರು. ಇಲ್ಲಿ ಶ್ರೀ ಶಂಭುಲಿಂಗೇಶ್ವರರ ಬೆಟ್ಟವಿದ್ದು, ದುರ್ಗಾಂಭ ದೇವಿಯ ದೇವಸ್ಥಾನ ಕೂಡ ಇದೆ. ದೀಪಾವಳಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಸ್ವಾಮಿಯ ಉತ್ಸವ ನಡೆಯುತ್ತಿದ್ದು, ಜಾತ್ರೆ ಕೂಡ ಏರ್ಪಾಡಾಗುತ್ತದೆ. ದೇವಸ್ಥಾನದ ಸಮೀಪದಲ್ಲಿ ಅನುಭವ ಮಂಟಪ ಇದ್ದು, ಕುಮಾರ ನಿಜಗುಣ ಸ್ವಾಮಿಗಳವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇವರು ಬರೆದ ’ಬೋಳು ಬಸವನ ಬೊಂತೆ” ಒಂದು ಅಮರ ಕೃತಿ. ಇವರು ಸಂಸಾರಿಕ ಜೀವನವನ್ನು ತ್ಯಜಿಸಿ, ಶ್ರೀ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಗಳವರಿಂದ ದೀಕ್ಷೆಯನ್ನು ಪಡೆದು ವಿರಕ್ತಿ ಮಾರ್ಗದೆಡೆಗೆ ನಡೆದಿದ್ದಾರೆ. ಈ ಸ್ಥಳದಲ್ಲಿ ಶ್ರೀ ನಿಜಗುಣಶಿವಯೋಗಿಗಳು ತಪೋಗೈದ ಗುಹೆ ಇದೆ.

ಕುಂತೂರು

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = 10 ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = 50 ಕಿ.ಮೀ. ಈ ಗ್ರಾಮದಲ್ಲಿ ಶ್ರೀ ಪ್ರಭುದೇವಸ್ವಾಮಿಯವರ ಬೆಟ್ಟ ಇದ್ದು, ವರ್ಷಕ್ಕೊಮ್ಮೆ ಸ್ವಾಮಿಗೆ ಹಾಲೆರೆವ ಉತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಬೆಟ್ಟದ ತಪ್ಪಲಿನ ಪರಿಸರದಲ್ಲಿ ಶ್ರೀ ಮಹದೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಇದ್ದು, ಈವಾಗ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸುತ್ತಮುತ್ತಲಿನ ಕಬ್ಬು ಬೆಳೆಗಾರರಿಗೆ ವರದಾನವಾಗಿದೆ. ಇಲ್ಲಿ ಕಾರ್ಖಾನೆಯ ನೌಕರರಿಗೆ ವಸತಿಗೃಹಗಳಿದ್ದು, ಕಾಲೋನಿಯೊಂದು ನಿರ್ಮಾಣಗೊಂಡಿದೆ. ಊರಿನ ಕೇಂದ್ರಸ್ಥಳದಲ್ಲಿ ದಾಸೋಹ ಮಠವಿದ್ದು, ಈ ಮಠದಲ್ಲಿ ಹಿಂದೆ ಶ್ರೀ ಮಾದೇಶ್ವರರವರು ಬಂದು ಹೋಗಿದ್ದ ಐತಿಹ್ಯವಿದೆ. ಶ್ರೀ ಮಠದಲ್ಲಿ ಅನ್ನದಾಸೋಹ ನಡೆಯುತ್ತದೆ.

ಶ್ರೀ ಸಿದ್ಧೇಶ್ವರ ಕ್ಷೇತ್ರ

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = 3 ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = 42 ಕಿ.ಮೀ. ಹೊಂಡರಬಾಳು ಶ್ರೀ ಸಿದ್ಧೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಗಿರಿಯಲ್ಲಿ ಗುಹೆಗಳು ಅಧಿಕವಾಗಿವೆ. ತುಟ್ಟತುದಿಯಲ್ಲಿರುವ ಮೊದಲ ಗುಹೆ ವಿಶಾಲವಾದುದು. ಪೂಜಾ ಬಾಗಿಲು, ದರ್ಶನ ಬಾಗಿಲು, ಸ್ವರ್ಗದ ಬಾಗಿಲು ಈ ರೀತಿ ೦೩ ಬಾಗಿಲುಗಳಿವೆ. ಪೂಜೆಯನ್ನು ಭಕ್ತರು ದರ್ಶನದ ಬಾಗಿಲ ಹತ್ತಿರ ಬಂದು ಮಾಡಿಸುತ್ತಾರೆ. ಸ್ವರ್ಗದ ಬಾಗಿಲ ಬಗ್ಗೆ ಒಂದು ದಂತಕಥೆಯಿದ್ದು, ಒಮ್ಮೆ ಮಕ್ಕಳಿಲ್ಲದ ದಂಪತಿಗಳು ಮಗುವಾದರೆ ಅದನ್ನು ಅದರ ಆಭರಣ ಉಡುಪಿನ ಜೊತೆ ನಿನಗರ್ಪಿಸುತ್ತೇವೆಂದು ವಿಚಿತ್ರ ಹರಕೆ ಹೊತ್ತರು. ಮಗುವಾಯಿತು. ಬಹಳ ದಿನಗಳ ನಂತರ ಮಗುವನ್ನು ಸಿಂಗರಿಸಿ ದೇವರ ದರ್ಶನಕ್ಕೆ ಹೋದರು. ಮಗು ಸ್ವರ್ಗದ ಬಾಗಿಲಲ್ಲಿ ಹೋಗಿ ಮತ್ತೆ ಹಿಂತಿರುಗಲಿಲ್ಲ. ಈಗಲೂ ಕೆಲವು ಸಂರ್ದಬ ಗುಹೆಯಲ್ಲಿ ಮಗುವಿನ ಗೆಜ್ಜೆಯ ಸದ್ದು ಕೇಳಿಸುವುದೆಂದು ಪ್ರತೀತಿ ಇದೆ.

ಕುರುಬನ ಕಟ್ಟೆ

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = 8 ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = 58 ಕಿ.ಮೀ. ಕೊಳ್ಳೇಗಾಲದ ಪಕ್ಕದಲ್ಲಿರುವ ಕುರುಬನ ಕಟ್ಟೆಯು ಶೀ ಮಂಟೆಸ್ವಾಮಿ ಯವರು ತಪಗೈದ ಸ್ಥಳ. ಇಲ್ಲಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತದೆ. ಪರಮ ಪರಂಜ್ಯೋತಿ ನೀವೇ ಬನ್ನಿ, ಮಂಟೇದ ಲಿಂಗಯ್ಯ ನೀವೇ ಬನ್ನಿ ಎಂದು ಹಾಡುವ ನೀಲಗಾರರ ಮೇಳ ಈ ಸ್ಥಳದಲ್ಲಿ ಕಾಣಬಹುದು. ಈ ಸ್ಥಳದ ಪಕ್ಕದಲ್ಲಿ ಕರಳಕಟ್ಟೆ ಎಂಬ ಗ್ರಾಮವಿದ್ದು, ಸೋಲಿಗರು ಇಲ್ಲಿ ವಾಸವಾಗಿದ್ದಾರೆ.

ಕನಕಗಿರಿ ಕ್ಷೇತ್ರ

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = 9 ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = 59 ಕಿ.ಮೀ. ಕ್ಷೇತ್ರವು ದೊಡ್ಡಿಂದವಾಡಿ ಗ್ರಾಮದ ಸನಿಹದಲ್ಲಿರುವ ಗಿರಿ ಪ್ರದೇಶ ಇಲ್ಲಿ ಪಾರ್ವತಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಪಂಚಲಿಂಗ ದರ್ಶನದಂದು ತಲಕಾಡಿನ ೦೫ ಲಿಂಗಗಳನ್ನು ದರ್ಶನ ಮಾಡಿ, ಕನಕಗಿರಿಯ ಪಾರ್ವತಿ-ಪರಮೇಶ್ವರರ ದರ್ಶನ ಪಡೆದರೆ ಕೈಲಾಸ ಪದವಿ ಪ್ರಾಪ್ತವಾಗುವುದೆಂದು ಪ್ರತೀತಿ ಇದೆ. ಆದ್ದರಿಂದಾಗಿ ಈ ದೇವರ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಇದೊಂದು ವೈದಿಕ ಮತ್ತು ಜಾನಪದ ಸಾಂಸ್ಕೃತಿಕ ಆಚರಣೆಯ ಸಂಗಮ, ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ವೈದಿಕ ಪರಂಪರೆಯನ್ನು ಪ್ರತಿನಿಧಿಸಿದರೆ ’ಶ್ರೀ ಗುಡ್ಡದ ಮಾರಮ್ಮನ ದೇವಸ್ಥಾನ ಜಾನಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಕೆಂಡಗಣ್ಣ ಸ್ವಾಮಿಗಳ ಗದ್ದುಗೆಯೂ ಪ್ರಮುಖವಾದುದಾಗಿದೆ.

ಗುಂಡಾಲ್ ಜಲಾಶಯ

ತಾಲ್ಲೂಕು ಕೇಂದ್ರದಿಂದ = 27 ಕಿ.ಮೀ. ಜಿಲ್ಲಾ ಕೇಂದ್ರದಿಂದ = 67 ಕಿ.ಮೀ. ಕೊಳ್ಳೇಗಾಲದಿಂದ ಲೊಕ್ಕನ ಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಎದುರಾಗುವುದೇ ಗುಂಡಲ್ ಅರಣ್ಯ. ಇಲ್ಲಿ ಬೆಟ್ಟ ಗುಡ್ಡಗಳಿವೆ, ಅಡ್ಡಲಾಗಿ ಆಕರ್ಷಕವಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. ಸುಂದರ ಪರಿಸರ ಬಯಸುವವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ವಾಸ್ತವ್ಯಕ್ಕೆ ಪ್ರವಾಸಿ ಬಂಗಲೆಯಿದೆ. ಈ ಜಲಾಶಯದಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

ಚಿಕ್ಕಲ್ಲೂರು

ತಾಲ್ಲೂಕು ಕೇಂದ್ರದಿಂದ = 27 ಕಿ.ಮೀ. ಜಿಲ್ಲಾ ಕೇಂದ್ರದಿಂದ = 67 ಕಿ.ಮೀ. ಶ್ರೀ ಚಕ್ಕಲ್ಲೂರು ಪುಣ್ಯಕ್ಷೇತ್ರವು ಧರೆಗೆ ದೊಡ್ಡವರು ಮಂಟೇಸ್ವಾಮಿಯವರ ಶಿಷ್ಯರಾದ ಸಿದ್ದಪ್ಪಾಜಿಯವರು ಐಕ್ಯವಾದ ಸ್ಥಳವಾಗಿದೆ. ಪವಾಡ ಪುರುಷ ಶ್ರೀ ಸಿದ್ದಪ್ಪಾಜಿಯವರು ನಿಡುಗಟ್ಟ ಗ್ರಾಮದ ಮುದ್ದೋಜಿ ಲಿಂಗವಂತ ಪಂಚಾಳದವರು, ಆತನ ಕಿರಿಯ ಮಗ ಕೆಂಪಣ್ಣ ಮಂಟೇಸ್ವಾಮಿಯ ಶಿಷ್ಯರಾಗಿ ಅನೇಕ ಪವಾಡಗಳನ್ನು ಮೆರೆಸಿ, ಕೊನೆಯಲ್ಲಿ ಚಿಕ್ಕಲ್ಲೂರು ಬಂದು ಐಕ್ಯವಾಗುತ್ತಾರೆ. ಈ ಕ್ಷೇತ್ರದಲ್ಲಿ ಪ್ರತೀ ವರ್ಷ ಜನವರಿ ಮಾಸದಲ್ಲಿ ಬರುವ ಪೌರ್ಣಿಮೆ ದಿನ ಸಂಕ್ರಾಂತಿಯ ಸಮಯದಲ್ಲಿ ಚಂದ್ರಮಂಡಲ ಆರಂಭದಿಂದ ಪಂತಿ ಸೇವೆಯಲ್ಲಿ ಮುಕ್ತಾಯವಾಗುವ ೦೫ ದಿನಗಳ ಜಾತ್ರೆ ನಡೆಯುತ್ತದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಕಾವೇರಿ ನದಿಯು ಸನಿಹದಲ್ಲಿ ಹರಿಯುತ್ತದೆ. ಸಮೀಪದಲ್ಲಿಯೇ ಮುತ್ತತ್ತಿರಾಯನ ಕ್ಷೇತ್ರವಿದೆ.

ಉಗನಿಯ

ತಾಲ್ಲೂಕು ಕೇಂದ್ರದಿಂದ = 12 ಕಿ.ಮೀ. ಜಿಲ್ಲಾ ಕೇಂದ್ರದಿಂದ = 52 ಕಿ.ಮೀ. ವಾಸವಾಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿ : ಕೊಳ್ಳೇಗಾಲದಿಂದ ಬೆಂಗಳೂರು ರಸ್ತೆಯಲ್ಲಿ ಕ್ರಮಿಸಿ ಧನಗೆರೆ ಊರಿನಿಂದ ಸ್ವಲ್ಪದೂರ ಮುಂದೆ ಹೋದಾಗ ಒಂದು ಕಚ್ಚಾ ರಸ್ತೆಯ ಮೂಲಕ ತಲುಪಿದಾಗ ಸಿಗುವ ಭವ್ಯ ದೇವಾಲಯ ಶ್ರೀ ವಾಸವಾಡಿ ವೀರಭದ್ರೇಶ್ವರ ಸನ್ನಿದಿ ಹಲವಾರು ಭಕ್ತರ ಸಮೂಹ ಹೊಂದಿರುವ ಅತಿ ಪುರಾತನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ತಯಾರಿಸಿ ನೀಡುವ ಅನ್ನ ಚಟ್ನಿ ತುಂಬಾ ವಿಶೇಷವಾದ ಪ್ರಸಾದವಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಅನ್ನಬ್ರಹ್ಮೋತ್ಸವವ ನಡೆಯಲಿದ್ದು ತುಂಬಾ ಸಂಖ್ಯೆಯ ಭಕ್ತಾದಿಗಳು ಸೇರಿ ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ದೇವಾಲಯದ ಪಕ್ಕದಲ್ಲಿ ಕೆರೆ ಇದ್ದು ಸುತ್ತಲಿನ ಪರಿಸರ ಸುಂದರ ಹಾಗೂ ಆಕರ್ಷಣೀಯವಾಗಿದೆ.

ಶಿವನ ಸಮುದ್ರ

ತಾಲ್ಲೂಕು ಕೇಂದ್ರದಿಂದ = 18 ಕಿ.ಮೀ. ಜಿಲ್ಲಾ ಕೇಂದ್ರದಿಂದ = 58 ಕಿ.ಮೀ. ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ವೈಷ್ಣವ, ಶೈವ ಹಾಗೂ ಶಕ್ತಿ ದೇವತೆಗಳಿಗೆ ಸೋಮೇಶ್ವರ ದೇವಾಲಯ ಬಹಳ ಪ್ರಾಚೀನವಾದ ದೇವಾಲಯ. ಇದರ ಸಮೀಪ ಶಕ್ತಿ ದೇವತೆ ಶಿವನ ಸಮುದ್ರ ಮಾರಮ್ಮ ಬಹಳ ಪ್ರಸಿದ್ಧ ದೇವಾಲಯ. ಭಯ- ಭಕ್ತಿಯಿಂದ ಜನರು ಇಲ್ಲಿಗೆ ಬಂದು, ಹೊತ್ತ ಹರಕೆಯನ್ನು ತೀರಿಸುವ ವಾಡಿಕೆ ಇಂದಿಗೂ ಕಂಡು ಬರುತ್ತದೆ. ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನ ಬಹಳ ವಿಶಾಲವಾದುದು. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇದೆ. ಇದಕ್ಕೆ ಮಧ್ಯರಂಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ- ಸೂರ್ಯಾಸ್ತದವರೆಗೆ ನೋಡಿದವರಿಗೆ ಪುಣ್ಯ ಬರುತ್ತದೆ ಎಂದು ಪ್ರತೀತಿ ಇದೆ. ಪ್ರತೀ ವರ್ಷ ಜಾತ್ರೆ ಸೇರು ನಡೆಯುತ್ತದೆ. ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಚಕ್ರವಿದೆ.

ವೆಸ್ಲಿ ಸೇತುವೆ

ಶಿವನಸಮುದ್ರ ಪ್ರದೇಶದಲ್ಲಿ ಕಾವೇರಿನದಿಗೆ ಅಡ್ಡಲಾಗಿ 3 ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವೆಸ್ಲೆ ಸೇತುವೆ ಹಳೆಯಕಾಲದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬೂದಬಾಳು ಕ್ಷೇತ್ರ

ತಾಲ್ಲೂಕು ಕೇಂದ್ರದಿಂದ = 18 ಕಿ.ಮೀ. ಜಿಲ್ಲಾ ಕೇಂದ್ರದಿಂದ = 58 ಕಿ.ಮೀ. ಬೂದಬಾಳು : ಕೊಳ್ಳೇಗಾಲ ತಾಲ್ಲೂಕಿನ ಬೂದಬಾಳು ಗ್ರಾಮದಲ್ಲಿ ಗುಡಿಹಟ್ಟಿ ವೆಂಕರಮಣಸ್ವಾಮಿ ಪ್ರಸಿದ್ಧ ದೇವಾಲಯವಿದೆ. ಇದು ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ವರ್ಷದಲ್ಲಿ ಒಮ್ಮೆ ಜಾತ್ರೆ ನಡೆಯುತ್ತದೆ. ಇದು ಮೂರು ದಿನಗಳ ಜಾತ್ರೆಯಾಗಿದ್ದು ಮೊದಲ ದಿನ ತೇರು, ಎರಡನೇ ದಿನ ವಧೆ ಅಥವಾ ರಾಕ್ಷಸನ ಸಂಹಾರ. ಮೂರನೇ ದಿನ ವಸಂತೋತ್ಸವ ನಡೆಯುತ್ತದೆ. ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

ದರ್ಗಾ

ತಾಲ್ಲೂಕು ಕೇಂದ್ರದಿಂದ = 20 ಕಿ.ಮೀ. ಜಿಲ್ಲಾ ಕೇಂದ್ರದಿಂದ = 60 ಕಿ.ಮೀ. ಮುಸಲ್ಮಾನರ ಪವಿತ್ರ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರ. ಭೋರ್ಗರೆದು ಧುಮ್ಮಿಕ್ಕುವ ಕಾವೇರಿ ತಟದಲ್ಲಿದ್ದು, ಗಗನಚುಕ್ಕಿ ಜಲಪಾತವನ್ನು ಉಂಟು ಮಾಡುವ ಸ್ಥಳವಾಗಿದೆ. ಈ ಜಲಾಶಯ ಉಕ್ಕಿ ಹರಿಯುವ ನೀರಿನಿಂದ ರಮ್ಯ ಮನೋಹರವಾಗಿದೆ. ಈ ತಟದಿಂದ ನಿಂತು ನೋಡಿದರೆ ವಿಶ್ವವಿಖ್ಯಾತ ಏಷ್ಯಾ ಖಂಡದ ಪ್ರಪ್ರಥಮ ಜಲ ವಿದ್ಯುತ್ ಸ್ಥಾವರವಾದ ಬ್ಲಫ್‌ನ ಸುಂದರ ನೋಟ ಕಾಣಿಸುತ್ತದೆ. ಈ ದರ್ಗ ಹಿಂದು-ಮುಸಲ್ಮಾನರ ಐಕ್ಯದ ಸಂಕೇತವನ್ನು ಸೂಚಿಸುವ ಸ್ಥಳವಾಗಿದೆ.

ಭರಚುಕ್ಕಿ

ಇಲ್ಲಿಂದ ಸ್ವಲ್ಪ ದೂರ ಮುಂದೆ ಹೋದಾಗ ಜಗತ್ತಿನಲ್ಲಿಯೇ ಅಪರೂಪದ ಭೂಸೃಷ್ಟಿಯ ಅಚ್ಚರಿ ಕಾವೇರಿಯ ಆರ್ಭಟ ಭರಚುಕ್ಕಿ ಜಲಪಾತವಿದೆ. ಇಲ್ಲಿ ಸುಮಾರು 01 ಕಿ.ಮೀ. ಅಗಲವಾಗಿ ಮೈದೆಳೆದಿರುವ ಕಾವೇರಿ ಸುಮಾರು 75 ರಿಂದ 100 ಅಡಿಯವರೆಗೆ ಭೂಮಿಯಿಂದ ಭೂಮಿಗೆ ಧುಮ್ಮಿಕ್ಕುವಳು. ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತ ವಿಶ್ವದ ಜಲಪಾತಗಳಲ್ಲಿ 83ನೇ ಸ್ಥಾನವನ್ನು ಪಡೆದಿದೆ.

ಯಡಕುರಿ

ತಾಲ್ಲೂಕು ಕೇಂದ್ರದಿಂದ = 14 ಕಿ.ಮೀ. ಜಿಲ್ಲಾ ಕೇಂದ್ರದಿಂದ = 54 ಕಿ.ಮೀ. ಚಾಮರಾಜನಗರ ಜಿಲ್ಲೆಯ ಏಕೈಕ ದ್ವೀಪ ಸ್ಥಳ. ಕಾವೇರಿ ನದಿಯು ತಲ ಕಾವೇರಿಯಲ್ಲಿ ಉಗಮವಾಗಿ ತಾನು ಹರಿಯುವ ಉದ್ದಕ್ಕೂ ವೈಚಿತ್ರಗಳನ್ನು ಸೃಷ್ಟಿಮಾಡುತ್ತದೆ. ಇಂತಹ ವೈಚಿತ್ರ್ಯಗಳಲ್ಲಿ ಯಡಕುರಿಯ ಕೂಡ ಒಂದು. ಇಲ್ಲಿ ಕಾವೇರಿ ನದಿ ಕವಲೊಡೆದು ಎರಡು ಭಾಗಗಳಾಗಿ ಮುಂದೆ ಮತ್ತೆ ಒಂದಾಗಿ ಸೇರುತ್ತದೆ. ಈ ಒಂದಾಗಿ ಸೇರುವ ಸ್ಥಳಕ್ಕೆ ಕೂಡುಮೂಲೆ ಎಂದು ಅಲ್ಲಿನ ಜನರು ಕರೆಯುತ್ತಾರೆ. ಯಡಕುರಿಯ ಸುತ್ತಲೂ ನೀರಿನಿಂದ ಸುತ್ತುವರಿದ ದ್ವೀಪ ಊರು. ಊರಿಗೆ ಹೋಗಲು ಹರಿಗೋಲೆ ಬೇಕು. ಅಂಬಿಗಣ್ಣನ ಅಪ್ಪಣೆ ಇಲ್ಲದೆ ಊರಿಗೆ ಪ್ರವೇಶವಿಲ್ಲ. ಇಲ್ಲಿಗೆ ವಿಶೇಷವಾಗಿ ಪಕ್ಷಿಗಳು ವಲಸೆ ಬರುವುದನ್ನು ಕಾಣಬಹುದು.

ಚಾಮರಾಜನಗರದ ತಾಲೂಕುಗಳು

  1. ಚಾಮರಾಜನಗರ
  2. ಯಳಂದೂರು
  3. ಕೊಳ್ಳೇಗಾಲ
  4. ಗುಂಡ್ಲುಪೇಟೆ
  5. ಹನೂರು

ಚಾರಣ

ಬಂಡಿಪುರ ಬಿಳಿಗಿರಿ ಬೆಟ್ಟ ಮಹದೇಶ್ವರ ಬೆಟ್ಟ ಗೋಪಾಲಸ್ವಾಮಿ ಬೆಟ್ಟ ಇವುಗಳು ಚಾಮರಾಜನಗರದಲ್ಲಿರುವ ಪ್ರಸಿದ್ದ ಚಾರಣ ಸ್ಥಳವಾಗಿವೆ.