ಮುಖಪುಟ ಜಿಲ್ಲಾ ಪ್ರೊಫೈಲ್ ಜಿಲ್ಲಾ ಅಂಕಿಅಂಶ ಜಿಲ್ಲೆಯನಕ್ಷೆ ಪ್ರವಾಸೋದ್ಯಮ ಫೋಟೋ ಗ್ಯಾಲರಿ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ
ಮಲೆ ಮಹದೇಶ್ವರ ಬೆಟ್ಟ ರಾಜಕೀಯ ದೃಶ್ಯಾವಳಿ ಕಂದಾಯ ಇಲಾಖೆ ಜಿಲ್ಲಾಪಂಚಾಯತ್ ಆರೋಗ್ಯ ಇಲಾಖೆ ಶಿಕ್ಷಣ ಎನ್ ಐ ಸಿ ಬಗ್ಗೆ
ಕೃ಼ಷಿ ವಿಜ್ಙಾನ ಕೇಂದ್ರ ಹರದನಹಳ್ಳಿ

ಅರಣ್ಯ ಹಕ್ಕುಗಳು

:: ಕೊಳ್ಳೇಗಾಲ ತಾಲ್ಲೂಕು::

        ಚಾಮರಾಜನಗರ ಜಿಲ್ಲೆಯ ಒಂದು ತಾಲ್ಲೂಕು ಜಿಲ್ಲಾ ಕೇಂದ್ರದ ಪೂರ್ವಕ್ಕೆ ಇರುವ ತಾಲ್ಲೂಕು ಕೇಂದ್ರ. ಈ ತಾಲ್ಲೂಕಿನ ಮೇರೆಗಳು, ಪಶ್ಚಿಮದಲ್ಲಿ ಚಾಮರಾಜನಗರ ಯಳಂದೂರು ಮತ್ತು ಟಿ.ನರಸೀಪುರ ತಾಲ್ಲೂಕುಗಳು. ಉತ್ತರದಲ್ಲಿ ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳು, ಪೂರ್ವ ಮತ್ತು ದಕ್ಷಿಣದಲ್ಲಿ ತಮಿಳುನಾಡು, ಕೊಳ್ಳೇಗಾಲ ಕಸಬಾ, ಪಾಳ್ಯ, ಹನೂರು, ರಾಮಾಪುರ ಹಾಗೂ ಲೊಕ್ಕನಹಳ್ಳಿ ತಾಲ್ಲೂಕಿನ ಐದು ಹೋಬಳಿಗಳು.

ಇತಿಹಾಸ

      &nbs ಕೊಳ್ಳೇಗಾಲ ತಾಲ್ಲೂಕು 1956ರವರೆಗೆ ಮದರಾಸು ಪ್ರಾಂತ್ಯದ ಕೊಯಮತ್ತೂರು ಜಿಲ್ಲೆಗೆ ಸೇರಿತ್ತು. ಆ ವರ್ಷ ರಾಜ್ಯಗಳ ಪುನರ್ವಿಂಗಡಣೆಯಾದಾಗ ಮೈಸೂರು ಜಿಲ್ಲೆಗೆ ಸೇರಿತು. ಮತ್ತೆ 1997 ರಲ್ಲಿ ಜಿಲ್ಲಾ ಪುನರ್ವಿಂಗಡಣೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಸೇರಿತು. ಕಹಳ ಮತ್ತು ಗಾಲವರೆಂಬ ಋಷಿಗಳಿಬ್ಬರು ಸ್ವಲ್ಪಕಾಲ ಇಲ್ಲಿ ವಾಸವಾಗಿದ್ದರಂತೆ. ಅದರಿಂದ ಈ ಊರಿಗೆ ಈ ಹೆಸರು ಬಂತೆಂಬ ಐತಿಹ್ಯವಿದೆ. ಮರುಳೇಶ್ವರ, ಕನ್ನಿಕಾಪರಮೇಶ್ವರಿ ದೇವಸ್ಥಾನಗಳು ಈ ಊರಿನಲ್ಲಿವೆ. ಊರಿನ ಸುತ್ತಮುತ್ತ ಬಸದಿಗಳಿದ್ದುದರ ಅವಶೇಷಗಳಿವೆ. ಈ ಸ್ಥಳವು ಜೈನಕವಿ ಪೂಜ್ಯಪಾದ, ಶರಣರಾದ ಮಾದೇಶ್ವರ, ನಿಜಗುಣ ಶಿವಯೋಗಿಗಳು ಮತ್ತು ಮುಪ್ಪಿನ ಷಡಕ್ಷರಿಗಳ ಸಂಬಂಧ ಹೊಂದಿದ್ದುದು ಒಂದು ಪ್ರಧಾನ ವಿಷಯವಾಗಿದೆ. ಈ ಊರಿಗೆ ಹತ್ತು ಕಿ.ಮೀ. ದೂರದಲ್ಲಿರುವ ಚಿಲಕವಾಡಿ ಗ್ರಾಮದಲ್ಲಿ ಶಂಭುಲಿಂಗೇಶ್ವರ ದೇವಸ್ಥಾನವಿದೆ ಹಾಗೆಯೇ ಶರಣ ನಿಜಗುಣ ಶಿವಯೋಗಿಗಳ ಮಂದಿರವೂ, ಒಂದು ಮಠವು ಇದ್ದು, ಇಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ನಿಜಗುಣ ಶಿವಯೋಗಿಗಳು ಶರಣ ಶ್ರೇಷ್ಠರು, ಪಂಡಿತೋತ್ತಮ ಮತ್ತು ಕನ್ನಡದ ಕವಿ. ಮಲೆಯ ಮಾದೇಶ್ವರ ಬೆಟ್ಟ ಮತ್ತು ಶಂಭುಲಿಂಗನಬೆಟ್ಟ ಈ ತಾಲ್ಲೂಕಿನಲ್ಲಿವೆ. ಕೊಳ್ಳೇಗಾಲಕ್ಕೆ ಸಮೀಪದಲ್ಲಿರುವ ಚಿಕ್ಕಲ್ಲೂರು ಗ್ರಾಮದಲ್ಲಿ ಮಂಟೇಸ್ವಾಮಿ ಪರಂಪರೆಯ ಗುರುವಾದ ಸಿದ್ದಪ್ಪಾಜಿಯವರ ಗದ್ದುಗೆಯಿದೆ. ಇವರ ಹೆಸರಿನಲ್ಲಿ ನಡೆಯುವ ಜಾತ್ರೆಗಳು ಬಹುಸಂಖ್ಯಾತ ಭಕ್ತರನ್ನು, ಯಾತ್ರಿಕರನ್ನು ಆಕರ್ಷಿಸುತ್ತವೆ. ಈ ತಾಲ್ಲೂಕಿಗೆ ಸೇರಿದ್ದ ಸತ್ಯಗಾಲ ಕಾವೇರಿ ನದಿಯ ದಂಡೆಯ ಮೇಲಿದ್ದು, ಇಲ್ಲೊಂದು ಪಾಳು ಕೋಟೆಯಿದೆ.

ತಾಲ್ಲೂಕಿನ ಅರ್ಧಭಾಗ

        ಪ್ರಾಕೃತಿಕವಾಗಿ ಕೊಳ್ಳೇಗಾಲ ತಾಲ್ಲೂಕು ಮೈಸೂರು ಪ್ರಸ್ಥಭೂಮಿಯ ಒಂದು ಭಾಗ. ಅದರ ಆಗ್ನೇಯ ಅಂಚಿನಲ್ಲಿದೆ. ತಾಲ್ಲೂಕಿನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಪೂರ್ವಘಟ್ಟಗಳ ದಕ್ಷಿಣದ ಕವಲುಗಳು ಹರಡಿದೆ. ಪೂರ್ವದಲ್ಲಿರುವ ಬೆಟ್ಟಗಳಲ್ಲಿ ಮಹದೇಶ್ವರ ಬೆಟ್ಟ ಶ್ರೇಣಿ ಪ್ರಸಿದ್ದವಾದದು. ಪಶ್ಚಿಮದಲ್ಲಿ ಬಿಳಿಗಿರಿರಂಗನಬೆಟ್ಟ ಶ್ರೇಣಿ ಇದೆ. ತಾಲ್ಲೂಕಿನ ವಾಯುವ್ಯ ಉತ್ತರ ಮತ್ತು ಪೂರ್ವದ ಅಂಚುಗಳಲ್ಲಿ ಕಾವೇರಿ ನದಿ ಹರಿಯುತ್ತದೆ. ಇದೇ ಆ ಭಾಗದ ಗಡಿರೇಖೆ.

ಗಗನಚುಕ್ಕಿ, ಭರಚುಕ್ಕಿ:

        ಕಾವೇರಿ ನದಿಯ ಗಗನಚುಕ್ಕಿ ಭರಚುಕ್ಕಿ ಜಲಪಾತಗಳು ತಾಲ್ಲೂಕಿನ ವಾಯುವ್ಯ ಭಾಗದಲ್ಲಿವೆ. ಆಗ್ನೇಯದ ಗಡಿಯಲ್ಲಿ ಪಾಲಾರ್ ಎಂಬ ಚಿಕ್ಕನದಿ ಇದೆ. ಚಾಮರಾಜನಗರ, ಯಳಂದೂರು ತಾಲ್ಲೂಕುಗಳಿಂದ ಬರುವ ಸುವರ್ಣಾವತಿ, ಕೊಳ್ಳೇಗಾಲದಿಂದ ಪಶ್ಚಿಮದಲ್ಲಿ ಸ್ವಲ್ಪ ದೂರ ಹರಿದು ಕಾವೇರಿಯನ್ನು ಸೇರುತ್ತದೆ. ಪೂರ್ವದಲ್ಲಿ ಬಿಳಿಗಿರಿರಂಗನಬೆಟ್ಟದಿಂದ ಬರುವ ಗುಂಡ್ಲುಹೊಳೆ ಇದೆ. ಬಿಳಿಗಿರಿರಂಗನಬೆಟ್ಟ ಮತ್ತು ಮಹದೇಶ್ವರ ಬೆಟ್ಟಗಳ ನಡುವೆ ತಗ್ಗು ಪ್ರದೇಶವಿದೆ. ಇಲ್ಲಿ ಹರಿಯುವ ಉಲಿಕೊಪ್ಪಹಳ್ಳ, ತಟ್ಟಹಳ್ಳ, ಉಡುತೊರೆಹಳ್ಳವನ್ನು ಕೂಡಿ ಈಶಾನ್ಯಭಿಮುಖವಾಗಿ ಹರಿದು ಕಾವೇರಿಯನ್ನು ಸೇರುತ್ತದೆ. ಗುಳಿಯೂವನೂರು ಹಳ್ಳ ಮತ್ತು ಮೇಲಕ್ಕಿಯೂರು ಹಳ್ಳಗಳು ಕಾವೇರಿ ಸೇರುತ್ತವೆ. ಮೆದುಗನಾಳ ಹಳ್ಳ ಪಾಲಾರ್ ನದಿಯನ್ನು ಸೇರುತ್ತದೆ.

ಅಂಕಿ ಅಂಶ:

        ಕೊಳ್ಳೇಗಾಲ ತಾಲ್ಲೂಕಿನ ವಿಸ್ತೀಣ್, 2786 ಚ.ಕಿ.ಮೀ. ತಾಲ್ಲೂಕಿನಲ್ಲಿ ಒಟ್ಟು 140 ಗ್ರಾಮಗಳಿವೆ. ಈ ಪೈಕಿ ಜನಸವಸತಿ ಇರುವ ಗ್ರಾಮಗಳ ಸಂಖ್ಯೆ 103 ಉಳಿದ 37 ಗ್ರಾಮಗಳಲ್ಲಿ ಜನವಸತಿ ಇರುವುದಿಲ್ಲ. 1991 ಜನಗಣತಿಯಂತೆ ಜನಸಂಕ್ಯೆ 3,04,600 ಜನಸಾಂದ್ರತೆ ಪ್ರತಿ ಚದರ ಕಿ.ಮೀ. 109.

ಮಳೆ-ಬೆಳೆ

       ಜನರ ಮುಖ್ಯ ಕಸುಬು ಕೃಷಿ ನೀರಾವರಿ ಸೌಲಭ್ಯವನ್ನು ಹೊಂದಿರುವ ಕೃಷಿಕರು ಭತ್ತ, ರಾಗಿ, ಪ್ರಮುಖವಾಗಿ ಬೆಳೆಯುತ್ತಾರೆ. ಕಬ್ಬು, ತೆಂಗು, ಸ್ವಲ್ಪಮಟ್ಟಿಗೆ ಇದೆ. ರೇಷ್ಮೆ ವ್ಯವಸಾಯ ಮತ್ತು ಕೈಗಾರಿಕೆ ಕೆಲವು ಭಾಗಗಳಲ್ಲಿದೆ. ಮಳೆಯ ವಾರ್ಷಿಕ ಸರಾಸರಿ 8.30 ಮೀ.

ಪ್ರೇಕ್ಷಣೀಯ ಸ್ಥಳ:

        ಮಹದೇಶ್ವರ ಬೆಟ್ಟ: ಮಹದೇಶ್ವರ (ಮಾದೇಶ್ವರ) ಬೆಟ್ಟವು ಈ ರಾಜ್ಯದಲ್ಲಿ ಅತ್ಯಂತ ಪ್ರಸಿದ್ದವಾದ ಯಾತ್ರಾಸ್ಥಳ. ಅದು ಘಟ್ಟದ ಮಧ್ಯದಲ್ಲಿ, ಪೂರ್ವ ಘಟ್ಟಗಳಿಗೆ ಸಮೀಪವಾಗಿದ್ದು, ರಾಮಾಪುರ ಹೋಬಳಿಗೆ ಸೇರಿದ್ದು ಕೊಳ್ಳೇಗಾಲಕ್ಕೆ ಸುಮಾರು 80 ಕಿ.ಮೀ. ಪೂರ್ವಕ್ಕೆ ಸಮುದ್ರ ಮಟ್ಟಕ್ಕಿಂತ 3,200 ಅಡಿಗಳು ಎತ್ತರದಲ್ಲಿದೆ. ಮಹದೇಶ್ವರನ ವಿಷಯದಲ್ಲಿ ಪ್ರಚಲಿತವಾಗಿರುವ ಜನಪದ ಹಾಡುಗಳ ಪ್ರಕಾರ ಏಳು ಬೆಟ್ಟಗಳಿಂದ ಇದು ಆವೃತವಾಗಿದೆ. ಈ ಬೆಟ್ಟದಲ್ಲಿ ಆನೆಮಲೆ, ಜೇನುಮಲೆ, ಕಾಡುಮಲೆ, ಪಚ್ಚೆಮಲೆ ಮುಂತಾದ 77 ಶ್ರೇಣಿಗಳಿವೆ. ಈ ಬೆಟ್ಟಗಳು ಪ್ರಾಣಿ ಮತ್ತು ಸಸ್ಯ ಸಂಪತ್ತುಗಳಿಂದ ತುಂಬಿವೆ. ಮಾದೇಶ್ವರನ ಹೆಸರಿನಲ್ಲಿ ನಿರ್ಮಿತವಾದ ದೇವಾಲಯವು ಈ ಬೆಟ್ಟದ ತುದಿಯಲ್ಲಿದೆ. ಸುತ್ತೂರು ಮಠದಲ್ಲಿರುವ ಶಿಲಾ ಮತ್ತು ತಾಮ್ರ ಶಾಸನಗಳ ಪ್ರಕಾರ ಮತ್ತು ಜನಪದ ಸಾಹಿತ್ಯ ಆಧಾರದ ಮೇಲೆ ಹೇಳುವುದಾದರೆ, ಮಹದೇಶ್ವುರ ಎಂಬ ವೀರಶೈವ ಸಂತನು ಕ್ರಿ.ಶ. 14-15ನೆಯ ಶತಮಾನಗಳಲ್ಲಿ ಜೀವಿಸಿದ್ದು, ಸುತ್ತೂರು ಮಠದಲ್ಲಿ ಕಾಯಕ ಅಥವಾ ದಾಸೋಹವನ್ನು ಮಾಡಿ, ಆನಂತರ ಕೊಳ್ಳೇಗಾಲಕ್ಕೆ ಸಮೀಪದಲ್ಲಿರುವ ಕುಂತೂರಿಗೆ ಹೋಗಿ, ಕೊನೆಗೆ ಈ ಬೆಟ್ಟದ ಮೇಲಿರುವ ಮಹಾಮಲೆ ಎಂಬಲ್ಲಿ ಜೀವಿಸಿದ್ದು ಸಮಾಧಿಯನ್ನು ಪಡೆದರು. ಅವರು ಅನೇಕ ಭಕ್ತರಿಗೆ ಅನುಗ್ರಹ ಮಾಡಿದುದರಿಂದ, ಈ ಪ್ರದೇಶವು ಪವಿತ್ರ ಸ್ಥಳವಾಯಿತು. ಅವರು ಅನೇಕ ಪವಾಡಗಳನ್ನೂ ಮಾಡಿದರೆಂದು ನಂಬಲಾಗಿದೆ. ಅವರ ಗೌರವಾರ್ಥವಾಗಿ ಈ ದೇವಾಲಯವನ್ನು ಕಟ್ಟಲಾಯಿತು. ಇದರಲ್ಲಿ ಗೋಪುರ ಮತ್ತು ಮಹಾದ್ವಾರಗಳಿವೆ. ಸಾಕಷ್ಟು ದೊಡ್ಡದಾಗಿರುವ ನಂದಿಯ ಮೂರ್ತಿಯು ಈ ದೇವಾಲಯದ ಮೇಲಿದೆ. ಈ ದೇವಾಲಯದ ಸುತ್ತಮುತ್ತಲೂ ಅನೇಕ ಸಣ್ಣ ದೇವಾಲಯಗಳಿವೆ. ಅಂತರಗಂಗೆ ಎಂಬ ಇಲ್ಲಿ ಸದಾ ಹರಿಯುವ ಜಲಸ್ಥಾನವಿದ್ದು, ಇದರಲ್ಲಿ ಯಾತ್ರಿಕರು ಸ್ನಾನ ಮಾಡುತ್ತಾರೆ. ಇಲ್ಲಿ ಶಿವರಾತ್ರಿ, ಉಗಾದಿ, ಗೌರೀಹಬ್ಬ (ಭಾದ್ರಪದ ಮಾಸ), ಮಹಾಲಯ ಅಮಾವಾಸ್ಯೆ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ರಥೋತ್ಸವ ಸಮಯದಲ್ಲಿ ದಕ್ಷಿಣ ಭಾರತದ ಎಲ್ಲಾ ಕಡೆಗಳಿಂದಲೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಇಲ್ಲಿ ಸೇರುತ್ತಾರೆ. ಇದಲ್ಲದೆ ಅನೇಕ ಭಕ್ತರು ಪ್ರತೀ ಅಮಾವಾಸ್ಯೆಗೂ ಇಲ್ಲಿಗೆ ದೇವರ ದರ್ಶನ್ಕಾಗಿ ಬರುತ್ತಾರೆ. ಮೈಸೂರಿನ ಒಡೆಯರು ಈ ದೇವಾಲಯಕ್ಕೆ ಅನೇಕ ದಾನದತ್ತಿಗಳನ್ನು ಕೊಟ್ಟಿದ್ದಾರೆ. ಈ ದೇವಾಲಯವು ಪ್ರಮುಖ ಮುಜರಾಯಿ ಸಂಸ್ಥೆಯಾಗಿದ್ದು ಒಳ್ಳೆಯ ಆಧಾಯವನ್ನು ಹೊಂದಿದೆ. ಇಲ್ಲಿ ಸಾಲೂರು ಮಠ ಎಂಬ ಹೆಸರಿನ ಹಳೆಯ ವೀರಶೈವ ದಾಸೋಹ ಮಠವಿದ್ದು ಜಾತ್ರೆಗಳ ಸಮಯದಲ್ಲಿ ಅದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರೇಕ್ಷಕರು ಇಲ್ಲಿನ ಸುತ್ತು ನೋಟ ಮತ್ತು ಮನೋಹರವಾದ ಪ್ರಕೃತಿ ಸೌಂದರ್ಯವನ್ನು ಅನುಭವಿಸಬಹುದು. ಆನೆ, ಕಾಡೆಮ್ಮೆ, ಮುಂತಾದ ವನ್ಯ ಮೃಗಗಳೂ ಇಲ್ಲಿ ಹೇರಳವಾಗಿವೆ. ಆಲಂಬಾಡಿ ಕೋಟೆಯು ಚರಿತ್ರಾರ್ಹವಾದ ಸ್ಥಳವಾಗಿದ್ದು ಇದು ಕಾವೇರಿಯ ತೀರದಲ್ಲಿದ್ದು ಮಹದೇಶ್ವರ ಮಲೆ ರಕ್ಷಿತ ಅರಣ್ಯದ ಬುಡದಲ್ಲಿದೆ. ಗೋಪಿನಾಥಂನಿಂದ ಆಲಂಬಾಡಿಗೆ ಹೋಗಲು ಕಾಡಿನ ಮಧ್ಯದಲ್ಲಿ ಒಂದು ಸಣ್ಣದಾದ ಬಂಡಿ ರಸ್ತೆಯಿದೆ. ಅಲ್ಲಿ ಹಾಳಾಗಿರುವ ಒಂದು ಮಣ್ಣಿನ ಕೋಟೆಯೂ, ಅದರೊಳಗೆ ವಿಜಯನಗರ ಕಾಲದ್ದೆಂದು ಹೇಳಲಾದ ಒಂದು ಹನುಮಂತನ ಗುಡಿಯೂ ಇವೆ. ಇಲ್ಲಿರುವ ರಂಗನಾಥ ದೇವಾಲಯವು 30 ಮೀ. ಉದ್ದವಾಗಿದೆ. ಮಣ್ಣಿನ ಕೋಟೆಯು ಚೌಕಾಕಾರವಾಗಿದದು ಸುಮಾರು 15ನೇಯ ಶತಮಾನಕ್ಕೆ ಸೇರುತ್ತದೆ. ಅದರ ಸುತ್ತಲೂ ಕಂದಕವಿದೆ. ಸತ್ತೇಗಾಲದಲ್ಲಿ ಪ್ರಾಚೀನ ದೇವಾಲಯಗಳಿವೆ. ಬಸ್ತೀಪುರ ಐತಿಹಾಸಿಕ ಸ್ಥಳ ಸು. 480 ರಲ್ಲಿ ಪೂಜ್ಯ ಜೈನಯತಿ ಇಲ್ಲಿ ಇದ್ದನೆಂದು ಪ್ರತೀತಿ ಇದೆ.

ಡಾ. ರಾಜಕುಮಾರ್:

        ಚಿತ್ರರಂಗದ ಕನ್ನಡಿಗರ ನೆಚ್ಚಿನ ನಟ ಡಾ. ರಾಜಕುಮಾರ್ ತಂದೆ ಪುಟ್ಟಸ್ವಾಮಯ್ಯ ಸಿಂಗಾನಲ್ಲೂರಿನವರು. ಚಲನಚಿತ್ರ ನಿರ್ದೇಶಕ ಎಸ್. ಮಹೇಂದರ್ ಬಂಡಹಳ್ಳಿಯವರು. 1972ರ ಆಗಸ್ಟ್ ತಿಂಗಳಲ್ಲಿ ಮೈಸೂರು ಜಿಲ್ಲೆಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ತಾಲ್ಲೂಕಿನಲ್ಲಿನ ಸೇರಿತ್ತು.

Back

ಹಕ್ಕುತ್ಯಾಗ: ವೆಬ್ಸೈಟ್ನ ಪರಿವಿಡಿಯನ್ನು ಜಿಲ್ಲಾ ಆಡಳಿತವು ಒದಗಿಸಿದೆ .
ಯಾವುದಕ್ಕಾದರೂ ಸಲಹೆ ಮೇಲ್ karcha@hub2.nic.in. ಅತ್ಯುತ್ತಮ ವೀಕ್ಷಣೆ 800X600 ಪಿಕ್ಸೆಲ್ಗಳಲ್ಲ.
ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್, ಚಾಮರಾಜನಗರ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ