ಮುಖಪುಟ ಜಿಲ್ಲಾ ಪ್ರೊಫೈಲ್ ಜಿಲ್ಲಾ ಅಂಕಿಅಂಶ ಜಿಲ್ಲೆಯನಕ್ಷೆ ಪ್ರವಾಸೋದ್ಯಮ ಫೋಟೋ ಗ್ಯಾಲರಿ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ
ಮಲೆ ಮಹದೇಶ್ವರ ಬೆಟ್ಟ ರಾಜಕೀಯ ದೃಶ್ಯಾವಳಿ ಕಂದಾಯ ಇಲಾಖೆ ಜಿಲ್ಲಾಪಂಚಾಯತ್ ಆರೋಗ್ಯ ಇಲಾಖೆ ಶಿಕ್ಷಣ ಎನ್ ಐ ಸಿ ಬಗ್ಗೆ
ಕೃ಼ಷಿ ವಿಜ್ಙಾನ ಕೇಂದ್ರ ಹರದನಹಳ್ಳಿ

ಅರಣ್ಯ ಹಕ್ಕುಗಳು

:: ಗುಂಡ್ಲುಪೇಟೆಯ ಇತಿಹಾಸ ::

        ಗುಂಡ್ಲುಪೇಟೆ ಚಾಮರಾಜನಗರ ಜಿಲ್ಲೆಯ ಒಂದು ತಾಲ್ಲೋಕು ಜಿಲ್ಲೆಯ ಪಶ್ಚಿಮಕ್ಕೀರುವ ತಾಲ್ಲೋಕು ಕೇಂದ್ರ ದಕ್ಷಿಣದಲ್ಲಿ ಕೇರಳ ಮತ್ತು ತಮಿಳುನಾಡು, ಪೂರ್ವದಲ್ಲಿ ಚಾಮರಾಜನಗರ, ಉತ್ತರದಲ್ಲಿ ನಂಜನಗೂಡು, ಪಶ್ಚಿಮದಲ್ಲಿ ಹೆಗ್ಗಡದೇವನಕೋಟೆ ತಾಲ್ಲೋಕು. ಕಸಬೆ, ಹಂಗಳ, ಬೇಗೂರು ಮತ್ತು ತೆರಕಣಾಂಬಿ ಎಂದು ನಾಲ್ಕು ಹೋಬಳಿಗಳು.

ಭೌಗೋಳಿಕ ಪರಿಚಯ:

        ಗುಂಡ್ಲುಪೇಟೆ ಈ ತಾಲ್ಲೋಕಿನ ಕೇಂದ್ರ, ಈ ಊರಿನ ಪ್ರಾಚೀನ ಹೆಸರು ವಿಜಯಪುರ. ತೆರಕಣಾಂಬಿ ಅರಸುಗಳ ವಶದಲ್ಲಿ ಬಹಳ ಕಾಲ ಇತ್ತೆಂದು ಹೇಳಲಾಗಿದೆ. ಗುಂಡ್ಲು ಹೊಳೆಯ ಎಡದಂಡೆಯ ಮೇಲಿರುವ ಈ ಊರು ಮೈಸೂರು-ಉದಕಮಂಡಲ (ಊಟಿ) ಹೆದ್ದಾರಿಯಲ್ಲಿ ಮೈಸೂರಿನಿಂದ ದಕ್ಷಿಣಕ್ಕೆ 61 ಕಿ.ಮೀ. ಚಾಮರಾಜನಗರದಿಂದ ಪಶ್ಚಿಮಕ್ಕೆ 34 ಕಿ.ಮೀ. ಪಶ್ಚಿಮದ ಕಡೆ ಕೇರಳದ ಸುಲ್ತಾನ್್ಡ ಬತ್ತೇರಿ ಮತ್ತು ಮುಂದೆ ಕಣ್ಣಾನೂರಿಗೆ ವಾಯುವ್ಯದಲ್ಲಿ ಹೆಗ್ಗಡದೇವನಕೋಟೆ ಕಡೆಗೆ ಹೋಗಲು ರಸ್ತೆಗಳಿವೆ. ತಾಲ್ಲೂಕಿನ ಅಕ್ಷಾಂಶ ಉತ್ತರಕ್ಕೆ 11-49’ ಮತ್ತು ರೇಖಾಂಶ ಪೂರ್ವಕ್ಕೆ 76-45’ ಇರುತ್ತದೆ..

ಐತಿಹಾಸಿಕ ಅಂಶಗಳು

        ಗುಂಡ್ಲುಪೇಟೆ ಬೆಳೆಯಲು ಮೈಸೂರಿನ ಚಿಕ್ಕದೇವರಾಜ ಒಡೆಯರು (1674) ಕಾರಣ. ಇವರು ತಮ್ಮ ಬಾಲ್ಯವನ್ನು ಗುಂಡ್ಲುಪೇಟೆಯ ಸಮೀಪದಲ್ಲಿನ ಹಂಗಳದಲ್ಲಿರುವ ಒಂದು ಕೋಟೆಯಲ್ಲಿ ಬಂಧನದಲ್ಲಿ ಕಳೆಯುತ್ತಿದ್ದಾಗ ಇವರ ತಂದೆ ವಿಧಿವಶರಾಗಲು ಅವರ ಅಂತ್ಯಕ್ರಿಯೆಯನ್ನು ವಿಜಯಪುರದ ಬಳಿ ಇರುವ ಗುಂಡ್ಲು ಹೊಳೆ ಬಳಿ ನೆರವೇರಿಸಿ ಮತ್ತೆ ಸೆರೆಮನೆಗೆ ಹಿಂದಿರುಗಿದರು. ಕಾಲಾನಂತರ ತಂದೆಯ ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಬಂದು ಅಗ್ರಹಾರವನ್ನು ಕಟ್ಟಿಸಿ, ವಿಜಯಪುರದ ಕೋಟೆಯನ್ನು ವಿಸ್ತರಿಸಿ ಭದ್ರಪಡಿಸಿ ತಂದೆಯ ಸಮಾಧಿಯ ಮೇಲೆ ಪರವಾಸುದೇವಾ ದೇವಾಲಯ ಕಟ್ಟಿಸಿದರು. ಅಂದಿನಿಂದ ಗುಂಡ್ಲುಪೇಟೆ ಎಂಬ ಹೆಸರನ್ನು ಗಳಿಸಿತು. ಈಗ ಅಗ್ರಹಾರವಾಗಲೀ ಕೋಟೆಯಾಗಲೀ ಉಳಿದಿಲ್ಲ. ಇಲ್ಲಿ ಅಳಿದ ಅರಸರ, ಪಾಳೆಗಾರ ಹಾಗೂ ಮಂಡಲಾಧಿಕಾರಿಗಳ ಬಗ್ಗೆ ಉಲ್ಲೇಖಿಸುವ 224 ಶಾಸನಗಳು ದೊರೆತಿವೆ.

ಅಂಕಿ- ಅಂಶ

       ಗುಂಡ್ಲುಪೇಟೆ ತಾಲ್ಲೋಕಿನ ವಿಸ್ತೀಣ್ಸ 1406.2 ಚ.ಕಿ.ಮೀ. ತಾಲ್ಲೋಕಿನಲ್ಲಿ ಒಟ್ಟು 162 ಗ್ರಾಮಗಳಿವೆ. ಈ ಪೈಕಿ ಜನವಸತಿ ಇರುವ ಗ್ರಾಮಗಳ ಸಂಖ್ಯೆ 144 ಉಳಿದ 15 ಗ್ರಾಮಗಳನ್ನು ಜನವಸತಿ ಇರುವುದಿಲ್ಲ. 1991ರ ಜನಗಣತಿಯಂತೆ ಜನಸಂಖ್ಯೆ 1,95,760 ಜನಸಾಂದ್ರೆ 739.

ನದಿ-ಬೆಟ್ಟ-ಕಾಡು

       ಈ ತಾಲ್ಲೂಕಿನ ಮುಖ್ಯ ನದಿ ಗುಂಡ್ಲು ಹೊಳೆ, ಇದಕ್ಕೆ ಕೌಂಡಿನ್ಯ ಎಂಬ ಹೆಸರೂ ಇದೆ. ಗೋಪಾಲಸ್ವಾಮಿ ಬೆಟ್ಟ ಇದರ ಉಗಮ ಸ್ಥಾನ. ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಈ ನದಿ ನಂಜನಗೂಡಿನಲ್ಲಿ ಕಪಿಲಾ ನದಿಯನ್ನು ಸೇರುತ್ತದೆ. ತಾಲ್ಲೂಕಿನ ದಕ್ಷಿಣದಲ್ಲಿ ಮಾಯಾರ್ ನದಿ ಹರಿಯುತ್ತದೆ. ಇದು ಕರ್ನಾಟಕ ಮತ್ತು ತಮಿಳುನಾಡುಗಳ ಗಡಿರೇಖೆಯಾಗಿದೆ. ಈ ತಾಲ್ಲೂಕಿನಲ್ಲಿ ಅನೇಕ ಕೆರೆಕಟ್ಟೆಗಳಿವೆ. ಇವುಗಳಲ್ಲಿ ಮುಖ್ಯವಾದವು ಕೋಡಹಳ್ಳಿ ಕೆರೆ, ನಳೂರ್ ಅಮಾನಿಕೆರೆ, ಕೂತನೂರು, ಮಲ್ಲಯ್ಯನಪುರ, ಗುಂಡ್ಲುಪೇಟೆ, ಅಣ್ಣೂರು ಕೆರೆಗಳು. ಸಕಾಲದಲ್ಲಿ ಮಳೆ ಬಂದಲ್ಲಿ ಮಾತ್ರ ಈ ಕೆರೆಗಳು ತುಂಬುವವು. ಈ ತಾಲ್ಲೂಕಿನಲ್ಲಿ ಜಲ ಸಂಪತ್ತಿನ ಕೊರತೆ ಇದೆ. ಕೋಡಹಳ್ಳಿ, ಹಕ್ಕಲಪುರಗಳಲ್ಲಿ ಸಣ್ಣ ಪ್ರಮಾಣದ ನೀರಾವರಿ ಯೋಜನೆಗಳಿವೆ. ಇಲ್ಲಿರುವ ಬೆಟ್ಟಗಳಲ್ಲಿ ಉಲ್ಲೇಖನೀಯವಾಗದ್ದು. ಶ್ರೀ ಹಿಮವದ್ಗೋಪಾಲಸ್ವಾಮಿ ಬೆಟ್ಟ, ಗುಂಡ್ಲುಪೇಟೆಯ ನೈಋತ್ಯಕ್ಕೆ 16 ಕಿ.ಮೀ. ದೂರದಲ್ಲಿದೆ. ಇದರ ಎತ್ತರ 1446 ಮೀಟರುಗಳು. ಗುಂಡ್ಲುಪೇಟೆಯ ಆಗ್ನೇಯಕ್ಕೆ 12 ಕಿ.ಮೀ. ದೂರದಲ್ಲಿ ಪಾರ್ವತಿ ಬೆಟ್ಟವಿದೆ. ಸ್ಕಂದಗಿರಿ ಅಥವಾ ಕಂದಗಾಲ ಬೆಟ್ಟವೆಂದೂ ಇದನ್ನು ಕರೆಯಲಾಗಿದೆ. ಕರಸ್ಥಲ ನಾಗಲಿಂಗನ ಬೆಟ್ಟ ಗುಂಡ್ಲುಪೇಟೆಯಿಂದ 10 ಕಿ.ಮೀ. ದೂರದಲ್ಲಿ ಮಂಚಹಳ್ಳಿ ಗ್ರಾಮಕ್ಕೆ ಸಮೀಪದಲ್ಲಿದೆ. ಹುಲಿಗನ ಮುರಡಿ ಬೆಟ್ಟ ತೆರಕರಣಾಂಬಿಯ ಆಗ್ನೇಯಕ್ಕೆ ಏಳು ಕಿ.ಮೀ. ದೂರದಲ್ಲಿದೆ. ಪಶ್ಚಿಮಕ್ಕೆ ಶ್ರೀರಾಮದೇವರ ಗುಡ್ಡವಿದೆ. ಬೇಗೂರು ಮತ್ತು ಹಿರಿಕಾಟಿಯಲ್ಲಿರುವ ಗುಡ್ಡಗಳು ಉಲ್ಲೇಖನೀಯ.ಈ ತಾಲ್ಲೂಕಿನಲ್ಲಿ 44,859 ಹೆಕ್ಟೇರ್ ಪ್ರದೇಶ ಅರಣ್ಯವಿದೆ. ತಾಲ್ಲೂಕಿನ ದಕ್ಷಿಣದಲ್ಲಿ 60 ಚದರ ಕಿ.ಮೀ. ಪಸರಿಸಿರುವ ಬಂಡೀಪುರ ಅಭಯಾರಣ್ಯವೂ ಇದೆ. ಬೆಲೆಬಾಳುವ ಶ್ರೀಗಂಧ, ತೇಗ, ಹೊನ್ನೆ, ನಂದಿ, ಹಲಸು, ಸಂಪಿಗೆಗಳು ಕಾಡಿನಲ್ಲಿವೆ. ಗೋಪಾಲಸ್ವಾಮಿ ಬೆಟ್ಟವೂ ದಟ್ಟ ಕಾಡಾಗಿದ್ದು ಅಲ್ಲಿ ನೇರಳೆ, ಸುರಗಿ, ಸುರಹೊನ್ನೆ, ಸಂಪಿಕೆಗಳಲ್ಲದೆ ಅನೇಕ ಉಪಯುಕ್ತ ಗಿಡಮೂಲಿಕೆಗಳೂ ಇವೆ

ಖನಿಜಗಳು

        ಈ ತಾಲ್ಲೂಕಿನಲ್ಲಿ ದೊರೆಯುವ ಮ್ಯಾಂಗನೀಸ್ ಗಾರ್ನೆಟ್ನ ಶಿಲಾವಲಯಗಳು, ಡನೈಟ್ ಶಿಲೆಗಳು ವಿಶ್ವದ ಕೆಲವೇ ಪ್ರದೇಶಗಳಲ್ಲಿ ಮಾತ್ರ ದೊರೆತಿವೆ ಎನ್ನಲಾಗಿದೆ. ಈ ತಾಲ್ಲೂಕಿನ ಕುರುಬರ ಹುಂಡಿ, ಹೊನ್ನೇಗೌಡನಹುಂಡಿ, ಕಂದಗಾಲ ಮತ್ತು ತೆರಕಣಾಂಬಿ ಸಮೀಪದ ಬೆಟ್ಟಗಳಲ್ಲಿ ಈ ಶಿಲೆಗಳು ದೊರೆಯುವವು. ಆಂಫಿಬೊಲೈಟ್್ು, ಕಾರ್ಡೈಡ್, ಅಮೃತ ಸುಣ್ಣ ಶಿಲೆ, ದತ್ತಮಣಿಯಕ್ತ ಶಿಲೆಗಳು, ಪದರಯುತ ಮ್ಯಾಂಗನೀಸ್ ಕ್ವಾರ್ಟ್ವ್್ ಶಿಲೆ, ಅತಿಕ್ಷಾರ ಶಿಲೆಗಳು (ಸ್ಯಾಗ್ವಾಂಡೈಟ್), ಗ್ಯಾಬ್ರೊ, ಡಯೋರೈಟ್್ು, ಡಾಲರೈಟ್್ , ಕಿರಿಯ ಕಣಶಿಲೆಗಳು ಈ ತಾಲ್ಲೂಕಿನ ಖನಿಜಸಂಪತ್ತುಗಳಾಗಿವೆ. ಈ ತಾಲ್ಲೂಕಿನ ಕೊಡಸೋಗೆ, ರಾಮಯ್ಯನಪುರ, ಶೀಲವಂತಪುರ ಮತ್ತು ಕುರುಬರಹುಂಡಿಗಳಲ್ಲಿ ಚಂದ್ರನಲ್ಲಿ ಕಾಣಿಸಿಗುವ ಶಿಲೆಗಳು ದೊರೆತಿವೆ. ಲೋಹಗಳಿಗೆ ಮೆರಗು ಕೊಡಲು ವಸ್ತುವಾಗಿ ಉಪಯೋಗಿಸುವ ಕುರಂದ (ಕೊರಂಡಂ)ವನ್ನು ಭೀಮನಬೀಡುವಿನಲ್ಲಿ ಗಣಿ ಮಾಡಿ ತೆಗೆಯುತ್ತಿದ್ದಾರೆ. ಬೇಗೂರಿನ ಸಮೀಪದ ಬೆಟ್ಟದ ಮಾದಹಳ್ಳಿ ಮತ್ತು ಕೋಡಿಹಳ್ಳಿಗಳಲ್ಲಿ ಸುಣ್ಣಕಲ್ಲು (ಕಂಕರ್) ದೊರೆಯುವುದು. ಬಣ್ಣ ಮತ್ತು ಕೈಗಾರಿಕೆಗಳಿಗೆ ಬೇಕಾಗುವ ಮ್ಯಾಗ್ಸೈಟ್್ಲ ತಾಲ್ಲೂಕಿನ ಹಲವು ಭಾಗಗಳಲ್ಲಿ ದೊರೆಯುವುದು. ತೆರಕಣಾಂಬಿ, ಮಲ್ಲಯ್ಯನಪುರ, ಕುಂದಕೆರೆಗಳಲ್ಲಿ ಅಲಂಕಾರ ಶಿಲೆಯಾಗಿ ಬಳಸುವ ಅಮೃತ ಶಿಲೆ ದೊರೆಯುತ್ತದೆ. ಕಬ್ಬಿಣಾಂಶವಿರುವ ಅದಿರು ಬೊಮ್ಮನಹಳ್ಳಿ, ಹರಗನಹಳ್ಳಿಗಳಲ್ಲೂ, ಮ್ಯಾಂಗನೀಸ್ ಶಿಲೆಗಳು ಕುರುಬರಹುಂಡಿ, ವಣಕನಪುರ, ಮಡಹಳ್ಳಿ, ಮದ್ದೂರು ತೆರಕಣಾಂಬಿ, ತ್ರಿಯಾಂಬಕಪುರ ಹನುಮಂತರಾಯನಗುಡಿ, ಬಾಚಹಳ್ಳಿಗಳಲ್ಲಿ ದೊರೆಯುವುದು. ಭೂಮಿಯಿಂದ ತುಂಬಾ ಆಳದಿಂದ 10 ರಿಂದ 20 ಕಿ.ಮೀ. ಗೋಡೆಯಂತೆ ಮೇಲೆ ಬಂದಿರುವವು ಡಾಲರೈಟ್ ಡೈಕುಗಳು. ಇವುಗಳಿಗೆ ಕರೀ ಕಣ ಶಿಲೆಗಳೆಂದೂ ಹೆಸರಿದೆ. ಈ ಕಲ್ಲಿನ ಗಣಿಗಳು ಮಂಚೇನಹಳ್ಳಿ, ಬರಗಿ, ಶೀಲವಂತಪುರ, ಬೊಮ್ಮನಹಳ್ಳಿ ಮತ್ತು ತೆರಕಣಾಂಬಿಗಳಲ್ಲಿವೆ. ಬೇಗೂರಿನ ಸಮೀಪ ಹಿರೀಕಾಟಿ, ಕಂದೇಗಾಲ, ಹಂಗಳ, ತೆರಕಣಾಂಬಿಗಳಲ್ಲಿ ಕಟ್ಟಡದ ಅಡಿಪಾಯಕ್ಕೆ ಬಳಸುವ ಕಣಶಿಲೆಯನ್ನು ಅಗೆದು ತೆಗೆಯಲಾಗುತ್ತಿದೆ. ಇವಲ್ಲದೇ ಮರಳು, ಪಿಂಗಾಣಿ, ರಂಗೋಲಿ ಮಣ್ಣುಗಳೂ ಈ ತಾಲ್ಲೂಕಿನಲ್ಲಿ ದೊರೆಯುತ್ತವೆ

ಮಳೆ-ಬೆಳೆ

        ತಾಲ್ಲೋಕಿನಲ್ಲಿ ಎರೆಮಣ್ಣು ಇದೆ. ಹೆಚ್ಚು ಭಾಗ ನುರುಜಭೂಮಿ, ಮಳೆ ಕಡಿಮೆ, ಜೋಳ ಮುಖ್ಯ ಬೆಳೆ, ರಾಗಿ ಅವರೆ, ಹರಳು ಇತ್ಯಾದಿ ಖುಷ್ಕಿ ಬೆಳೆಗಳನ್ನು ಬೆಳೆಯುತ್ತಾರೆ. ಕೆರೆ, ಬಾವಿಗಳಿಂದ ಸ್ವಲ್ಪಮಟ್ಟಿಗೆ ಭತ್ತ-ಕಬ್ಬು ಬೆಳೆಯುತ್ತಾರೆ. ಇಲ್ಲಿಯ ವೀಳ್ಯದಲೆ ಪ್ರಸಿದ್ದ. ಮಳೆಯ ವಾರ್ಷಿಕ ಸರಾಸರಿ 693 ಮಿ.ಮೀ.

ಕಲೆ ಮತ್ತು ಜನಪದ

        ಈ ತಾಲ್ಲೂಕು ಜನಪದ ಕಲೆಗಳ ಸಮೃದ್ದ ಕಣಜವಾಗಿದೆ. ಗಾದೆಗಳು, ಕಥೆಗಳು, ತ್ರಿಪದಿಗಳು, ಪರಸಂಗ ಪದಗಳು ವಿಪುಲವಾಗಿವೆ. ಕಳೆ ಕೀಳುವಾಗ, ಕಡಲೆಕಾಯಿ ಕೀಳುವಾಗ ಮತ್ತು ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ ಹೆಣ್ಣು ಮಕ್ಕಳು ಪದ ಹೇಳುತ್ತಾರೆ. ಹಿಮವದ್ಗೋಪಾಲಸ್ವಾಮಿ, ಹೊಣಕಾರಪ್ಪ, ಪಾರ್ವತಿ, ಮದ್ದಾನೇಶ, ಯಾಗಮ್ಮ, ಬರಗಿಮಾರಿ, ಮುಂತಾದ ದೇವತೆಗಳನ್ನು ಕುರಿತಂತೆ ಹಾಡುಗಳಿವೆ. ಒಗಟು ಹೇಳುವುದರಲ್ಲೂ ಇವರು ನಿಪುಣರು.

ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು

        ತೆರಕಣಾಂಬಿ: ಇದು ಗುಂಡ್ಲುಪೇಟೆಯ ಪೂರ್ವಕ್ಕೆ 11 ಕಿ.ಮೀ. ದೂರದಲ್ಲಿರುವ ಐತಿಹಾಸಿಕ ಸ್ಥಳ, ಹೋಬಳಿ ಕೇಂದ್ರ ತೆರಕಣಾಂಬಿ ತ್ರಿಕದಂಬಪುರ, ತಿರಕಣಾಂಬಿ, ತಿರಕಣಾಂಬೆ ಎಂದೂ ಕರೆಯಲಾಗುತ್ತಿದೆ. ತಮಿಳುನಾಡು, ಹದಿನಾಡು (ದಕ್ಷಿಣ ಕರ್ನಾಟಕದ ಗಡಿ) ಕೇರಳ ಇರುವ ಸ್ಥಳ ಕೂಡಗಲ್ಲೂರು, ಮೂರು ಗಡಿಕಲ್ಲುಗಳಿದ್ದ ಪ್ರದೇಶವೇ ತ್ರಿಕದಂಬಪುರ. ಇದೇ ಮುಂದೆ ತೆರಕಣಾಂಬಿಯಾಯಿತೆಂದು ಹೇಳಲಾಗಿದೆ. ಕಡಾಂಬಿ ವಂಶಸ್ಥರು, ಪ್ರಥಮ ಬಾರಿಗೆ ಇಲ್ಲಿಗೆ ಬಂದು ನೆಲೆಸಿದರು. ಕಡಾಂಬಿಗೆ ತಿರು ಶಬ್ದ ಸೇರಿ ತಿರುಕಡಾಂಬಿ, ತಿರುಕಣಾಂಬಿ ಆಗಿರಬಹುದು. ಕದಂಬ ದೊರೆ ಮುಕ್ಕಣ್ಣ ಕಂದಬನ ಸಂಸ್ಕೃತ ರೂಪು ತ್ರಿಕದಂಬ. ಅವನ ಹೆಸರಿನಲ್ಲಿ ನಿರ್ಮಿಸಲಾದ ಈ ಊರು ಮುಂದೆ ತೆರೆಕಣಾಂಬಿ ಆಗಿರಲೂ ಸಾಕು ಎಂದು ಪ್ರಸಿದ್ದ ಸಂಶೋಧಕ ಜಿ.ಜಿ. ಮಂಜುನಾಥನ್ ಊಹಿಸಿರುತ್ತಾರೆ. ತಿರುಕಣ್ಣನಂಬಿ ಎಂಬ ಶ್ರೀ ಕೃಷ್ಣಭಕ್ತನ ಹೆಸರಿನಿಂದ ತಿರುಕಣಾಂಬಿ ಹೆಸರು ಬಂದಿರಬಹುದೆಂದೂ ಊಹಿಸಲಾಗಿದೆ. ಶಾಸನಗಳಲ್ಲಿ “ತೆರಕಣಾಂಬಿಯ ರಾಯಕಟಕ” ತೆರಕಣಾಂಬಿ ಮಹಾರಾಜ್ಯೇ ಜಗತೀ ತಳೇ’, ‘ತೆರಕಣಾಂಬಿಯ ಭಂಡಾರ’ ಮೊದಲಾಗಿ ಉಲ್ಲೇಖಿಸಿರುವುದರಿಂದ, ಒಂದು ಕಾಲದಲ್ಲಿ ಇದೊಂದು ಸಮೃದ್ದ ರಾಜ್ಯವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ತೆರಕಣಾಂಬಿ ಮೊದಲಿಗೆ ಗಂರ ವಶದಲ್ಲಿತ್ತು. ಗಂಗರ ತರುವಾಯ ಇದು ಚೋಳರ ಆಡಳಿತಕ್ಕೆ ಬಂತು.ಹೊಯ್ಸಳರ ಪ್ರತಿನಿಧಿಯಾಗಿ ಈ ರಾಜ್ಯವನ್ನಾಳಿದ ದಂಡನಾಯಕರ ಹೆಸರುಗಳು ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ. ‘ಕೊಂಗಮಾರಿ’ ‘ಕೊಂಗದಿಶಾಪಟ್ಟ’ ಎಂಬ ಅವರ ಬಿರುದುಗಳಿಂದ ಅವರು ಚೋಳರನ್ನು ಹಿಮ್ಮೆಟ್ಟಿಸಿದರೆಂಬುದು ಸ್ಪಷ್ಟವಾಗುತ್ತದೆ. ಮೊಡೆಯ ಕುಲದ ಭೀಮದೇವ, ಅವನ ಮಕ್ಕಳಾದ ಪೆರುಮಾಳ ದಣ್ಣಾಯಕ, ಮಾಧವ ದಣ್ಣಾಯಕ, ಭರತಜೀಯ ದಣ್ಣಾಯಕ, ಕೇತೆಯ ದಣ್ಣಾಯಕ-ಇವರೆಲ್ಲ ಈ ರಾಜ್ಯದ ಆಡಳಿತ ನಡೆಸಿದ ಹೆಸರಾಂತ ಕಲಿಗಳು.

ತ್ರಿಯಂಬಕಪುರ :

        ತೆರಕಣಂಬಿಯ ನೈಋತ್ಯಕ್ಕೆ 2.4 ಕಿ.ಮೀ. ಅಂತರದಲ್ಲಿದೆ. ಇಲ್ಲೊಂದು ಬೃಹತ್ ಕಲ್ಲಿನ ದೇವಾಲಯವಿದೆ. ಹದಿನಾರು ಕೇರಳ ಮತ್ತು ತಮಿಳುನಾಡುಗಳ ಗಡಿಕಲ್ಲುಗಳು ಸೇರುವೆಡೆ ಲಂಬಕರ್ಣನೆಂಬವ ತ್ರಿಕದಂಬೇಶ್ವರನನ್ನು ಪ್ರತಿಷ್ಠಾಪಿದನೆಂಬುದು ಪ್ರತೀತ. 12.2 ಮೀಟರ್ ಎತ್ತರದ ದೀಪಸ್ತಂಭವೊಂದಿದ್ದು, ಅದರ ಸುತ್ತ ಮಂಟಪವಿದೆ. ಮುಖ್ಯ ದೇವಾಲಯ ಗರ್ಭಗುಡಿ ಮತ್ತು ಸುಕನಾಸಿಗಳನ್ನು ಒಳಗೊಂಡಿದೆ. ಗರ್ಭಗುಡಿಯ ಆಗ್ನೇಯ ದಿಕ್ಕಿನಲ್ಲಿ ಸಪ್ತಮಾತೃಕೆಯರ ಮಂದಿರವಿದೆ. ನವರಂಗದ ಉತ್ತರದಲ್ಲಿ ಮಯೂರಾಸನದ ಸುಬ್ರಹ್ಮಣ್ಯನಿದ್ದಾರನೆ. ತೆರಕಣಾಂಬಿಯ ವರದರಾಜ ದೇವಾಲಯದಲ್ಲಿರುವ ಹನುಮಂತನಿಂದ ರಾಮಾಯಣ ಕೇಳುತ್ತಿರುವ ರಾಮ, ಲಕ್ಷ್ಮಣ, ಸೀತೆಯರ ವಿಗ್ರಹಗಳು ಇಲ್ಲಿಯವು. ನವರಂಗದ ದಕ್ಷಿಣದ ಭಾಗದಲ್ಲಿರುವುದು ಗಣೇಣ ವಿಗ್ರಹ, ನೈಋತ್ಯದಲ್ಲಿ ಕಲ್ಯಾಣ ಮಂಟಪವಿದೆ. ಈ ದೇವಾಲಯದ ಗರ್ಭಗೃಹ, ಸುಕನಾಸಿಗಳು ಹೊಯ್ಸಳರ ಕಾಲದ್ದು, ಪೂರ್ವದಲ್ಲಿರುವ ಮಹಾದ್ವಾರ ನಿರ್ಮಾಣವಾದ್ದು ವಿಜಯನಗರ ಕಾಲದಲ್ಲಿ 1250-1350ರ ಕಾಲದಲ್ಲಿ ದೇವಾಲಯದ ನಿರ್ಮಾಣವಾಗಿರಬಹುದು.

ಹುಲಿಗನಮುರಡಿ

        ತೆರಕಣಾಂಬಿಯಿಂದ ದಕ್ಷಿಣಕ್ಕೆ 6.4 ಕಿ.ಮೀ. ದೂರದಲ್ಲಿ ಹುಲಿಗನಮುರಡಿ ವೆಂಕಟರಮಣಸ್ವಾಮಿ ಬೆಟ್ಟವಿದೆ. ಈ ಬೆಟ್ಟದ ಇನ್ನೊಂದು ಹೆಸರು ಶೇಷಾದ್ರಿ. ತೆರಕಣಾಂಬಿಯ ಸಾಹುಕಾರ ದಾಸಕೇಶವಶೆಟ್ಟಿ ಇಲ್ಲಿಯ ದೇವಾಲಯ ಕಟ್ಟಿಸಿದ. 1629ರಲ್ಲಿ ವೈಕುಂಠ ನಾರಾಯಣಸ್ವಾಮಿ ಗುಡಿ ಮತ್ತು ಅಮ್ಮನವರ ಗುಡಿ ನಿರ್ಮಾಣವಾದ್ದು 1678 ರಲ್ಲಿ ಚಿಕ್ಕದೇವರಾಜ ಒಡೆಯರ ಪತ್ನಿ ದೊಡ್ಡ ಮುದ್ದಮ್ಮ ಬೆಟ್ಟದ ಮೇಲೊಂದು ಕೋಟೆ ಕಟ್ಟಿಸಿದಳು (1696).

ಕೋಟೆಕೆರೆ

       ಬೇಗೂರಿನಿಂದ ಪಶ್ಚಿಮ್ಕೆ 4.8 ಕಿ.ಮೀ ದೂರದಲ್ಲಿದೆ. ಇಲ್ಲೊಂದು ವೀರಗಳಲ್ಲಿದೆ. ಇದು ಹತ್ತನೆಯ ಶತಮಾನಕ್ಕೆ ಸೇರಿದ್ದಾಗಿದೆ. ಕೊಲ್ಲಿಯಣ್ಣ ಎಂಬಾತ ವೀರಮರಣ ವನ್ನಪ್ಪಿದ್ದಕ್ಕಾಗಿ ಅವನ ಮಗ ಸಾಂತಣ್ಣ ಈ ವೀರಗಲ್ಲನ್ನು ನಿಲ್ಲಿಸಿದ. ಇಲ್ಲಿ ರಾಮೇಶ್ವರ, ವೇಣುಗೋಪಾಲ, ಚಂದ್ರಮೌಳೇಶ್ವ್ರ ಮತ್ತು ಗಣೇಶನ ದೇವಾಲಯಗಳಿವೆ. ಈ ದೇವಾಲಯಗಳನ್ನೆಲ್ಲ ದೊಡ್ಡದು ವೇಣುಗೋಪಾಲಸ್ವಾಮಿಯದು. ದೇವಾಲಯದಲ್ಲಿ ಕಲ್ಲಿನ ಮಹಾದ್ವಾರ, ಮುಖಮಂಟಪ ಮತ್ತು ನವರಂಗಗಳಿವೆ. ದೇವಾಲಯದ ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಸುಕನಾಸಿ ಮತ್ತು ಗರ್ಭಗೃಹಗಳಿವೆ. ಪದ್ಮ-ಧ್ಯಾನಮುದ್ರೆಗಳಿಂದ ಕೂಡಿ ಕುಳಿತಿರುವ ದೇವತೆಯ ವಿಗ್ರಹ ದಕ್ಷಿಣ ಭಾಗದಲ್ಲಿದೆ. ಎಡಭಾಗದಲ್ಲಿ ನಮ್ಮಾಳ್ವಾರರು ಮತ್ತು ರಾಮಾನುಜರ ವಿಗ್ರಹಗಳಿರುತ್ತದೆ.

ಹಂಗಳ

        ಗುಂಡ್ಲುಪೇಟೆಯಿಂದ ದಕ್ಷಿಣಕ್ಕೆ ಎಂಟು ಕಿ.ಮೀ. ದೂರದಲ್ಲಿದೆ. ಇಲ್ಲಿಯ ಮುಖ್ಯ ದೇವಾಲಯ ವರದರಾಜಸ್ವಾಮಿಯದು. ಗರ್ಭಗೃಹ, ಸುಕನಾಸಿ, ನವರಂಗ ಮತ್ತು ಚಿಕ್ಕ ಮಂಟಪಗಳಿಂದೊಡಗೂಡಿದೆ. ಈ ದೇವಾಲಯ, ವರದರಾನೆಂದು ಕರೆಯಲಾಗುವ ಜರ್ನಾಧನ ವಿಗ್ರಹವಿದೆ. ಈತ ಮಂದ ಸ್ಮಿತನಾಗಿಲ್ಲ, ಮೂರನೆಯ ನರಸಿಂಹಬಲ್ಲಾಳನ ಶಾಸನಗಳು ಸುಕನಾಸಿಯ ಉತ್ತರ ಭಾಗದಲ್ಲಿವೆ. ಜರ್ನಾಧನ ವಿಗ್ರಹದ ಸ್ಥಾಪನೆ ಬಲ್ಲಾಳನ ಕಾಲದಲ್ಲಿ ಆಗಿರಬಹುದೆಂದು ಊಹಿಸಲಾಗಿದೆ. ಒಳ ನವರಂಗದ ದಕ್ಷಿಣ ಗೋಡೊಯಲ್ಲಿ ನಮ್ಮಾಳ್ವಾರರ ವಿಗ್ರಹಗಳ ಮಧ್ಯೆ ಮಾಧವನ ಮೂರ್ತಿ ಇದೆ. ಮಾಧವನು ಬಲಗಡೆಯ ಮುಂಭಾಗದಲ ಕೈಯಲ್ಲಿ ಬೆಣ್ಣೆ ಮುದ್ದೆ ಹಿಡಿದಿರುವ ಭಂಗಿಯನ್ನು ಅತ್ಯಂತ ಮೋಹಕವಾಗಿ ಕಂಡರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಮಧುಕೇಶ್ವರ ದೇವಾಲಯದ ಮಾಧವ ವಿಗ್ರಹದ ಹೋಲಿಕೆ ಇದಕ್ಕಿದೆ. ಶ್ರೀರಂಗರಾಯ ರಾಜ್ಯವಾಳುತ್ತಿದ್ದ ಕಾಲದಲ್ಲಿ ಹಂಗಳದ ಹಳೆಯ ಅರಮನೆಯಿದ್ದ ಸ್ಥಳದಲ್ಲಿ ಅಮೃತಮ್ಮನು ಕಲ್ಲು ಮಠ ನಿರ್ಮಿಸಿ, ರಾಜವೊಡೆಯರು ನಿಧನರಾದ ಸ್ಥಳದಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡಿಸಿ, ಮರಳ ಬಸವಲಿಂಗ ದೇವರಿಗೆ ಹೊರಕೇರಿ ಬಾಚಳ್ಳಿ, ಸಹಿತ ದಾನ ನೀಡಿದ್ದು ಹಂಗಳದ 1956ರ ಶಾಸನದಿಂದ ತಿಳಿದುಬರುತ್ತದೆ

ಗೋಪಾಲಸ್ವಾಮಿ ಬೆಟ್ಟ

        ಗುಂಡ್ಲುಪೇಟೆಯಿಂದ 16 ಕಿ.ಮೀ. ದೂರದಲ್ಲಿರುವ ಸುಂದರ ತಾಣ. ಸಮುದ್ರ ಮಟ್ಟದಿಂದ 1446 ಮೀಟರುಗಳ ಎತ್ತರದಲ್ಲಿದೆ. ಈ ಬೆಟ್ಟದ ಸುತ್ತಳತೆ 25 ಕಿ.ಮೀ. ದೇವಾಲಯ ಬುಡದಿಂದ ಐದು ಕಿ.ಮೀ. ದೂರದಲ್ಲಿದೆ. ಪುರಾಣದಲ್ಲಿ ಕಮಲಾಚಲ, ಕಂಜಗಿರಿ, ಗೋವರ್ಧನಗಿರಿಯೆಂದು ಈ ಬೆಟ್ಟವನ್ನು ವರ್ಣಿಸಲಾಗಿದೆ. ಸದಾ ಹಿಮಾಚ್ಛಾದಿತವಾಗಿರುವಂತೆ ಗೋಚರಿಸುವುದರಿಂದ ಹಿಮವದ್ಗೋಪಾಲಸ್ವಾಮಿ ಬೆಟ್ಟವೆಂದೂ ಕರೆಯಲಾಗಿದೆ. ಕ್ರಿ.ಶ. 1504ರ ನಂಜನಗೂಡು ಶಾಸನದಲ್ಲಿ ಇದನ್ನು ಮೂಡಣ ಕೋಟೆ ಎಂದು ಕರೆಯಲಾಗಿದೆ. ಈ ಬೆಟ್ಟವನ್ನು ಕಾಲ್ನಡಿಗೆಯಿಂದಲೂ ಕ್ರಮಿಸಬಹುದು. ಬೆಟ್ಟಕ್ಕೆ ವಾಹನ ಸೌಕರ್ಯವೂ ಉಂಟು, ಪೌರಾಣಿಕವಾಗಿ, ಐತಿಹಾಸಿಕವಾಗಿ ಮತ್ತು ಸಾಹಿತ್ಯಕವಾಗಿ ಈ ಬೆಟ್ಟ ಮಹತ್ವ ಪಡೆದಿದೆ. ಅಗಸ್ತ್ಯರು ದಕ್ಷಿಣ ದೇಶವನ್ನು ಪವಿತ್ರಗೊಳಿಸಲೆಂದು ಇಲ್ಲಿಗೆ ಎಂದು ತಪಸ್ಸು ಮಾಡಿದರಂತೆ. ಗೋಪಾಲಸ್ವಾಮಿ ಪ್ರತ್ಯಕ್ಷನಾದಾಗ, ಅವರು ಸ್ವಾಮಿಗೆ ಬೆಟ್ಟಕ್ಕೆ ಬಂದು ನೆಲೆಸಬೇಕೆಂಬ ಕೊರಿಕೆ ಸಲ್ಲಿಸಿದರಂತೆ, ಅವರ ಕೋರಿಕೆ ಮನ್ನಿಸಿದ ಸ್ವಾಮಿ ರುಕ್ಷಿಣಿ ಸತ್ಯಭಾಮೆಯರೊಂದಿಗೆ ಇಲ್ಲಿ ಬಂದು ನೆಲಸಿದನೆನ್ನಲಾಗಿದೆ. ಈ ಬೆಟ್ಟದ ಮೇಲೆ ಕೌಂಡಿನ್ಯ ಋಷಿ ಇದ್ದನೆಂದೂ, ಅವನಿಂದಲೇ ಮುಂದೆ ಕೌಂಡಿನ್ಯ ನದಿ ಉಗಮಿಸಿತೆಂದೂ ಹೇಳಲಾಗಿದೆ. ಈ ಬೆಟ್ಟದ ನಾನಾ ದಿಕ್ಕುಗಳಲ್ಲಿ ಋಷಿಗಳ ಆಶ್ರಮವಿತ್ತೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

Back

ಹಕ್ಕುತ್ಯಾಗ: ವೆಬ್ಸೈಟ್ನ ಪರಿವಿಡಿಯನ್ನು ಜಿಲ್ಲಾ ಆಡಳಿತವು ಒದಗಿಸಿದೆ .
ಯಾವುದಕ್ಕಾದರೂ ಸಲಹೆ ಮೇಲ್ karcha@hub2.nic.in. ಅತ್ಯುತ್ತಮ ವೀಕ್ಷಣೆ 800X600 ಪಿಕ್ಸೆಲ್ಗಳಲ್ಲ.
ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್, ಚಾಮರಾಜನಗರ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ